ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಡಿಬಂಡೆ ತಾ. ಯುವಜನ ಮೇಳ ಉದ್ಘಾಟನೆ

Vishwanath S
Updated On : 17 Dec 2013, 12:44 pm

ಗುಡಿಬಂಡೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸಹಯೋಗದಲ್ಲಿ ತಾಲೂಕು ಮಟ್ಟದ ಯುವಜನ ಮೇಳ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಗುಡಿಬಂಡೆ ತಾಲೂಕಿನಲ್ಲಿ ದೇಶ ಮೆಚ್ಚುವಂತಹ ವ್ಯಕ್ತಿಗಳಾದ ಮುಖವೀಣೆ ಅಂಜಿನಪ್ಪ, ಕಡೇಹಳ್ಳಿ ನಂಜುಡಪ್ಪ, ಗಮಕ ಸಾಹಿತಿ ರಾಮಾಚಾರ್, ರಂಗಕರ್ಮಿ ಜೆ.ಬಿ.ಶೆಟ್ಟಪ್ಪ ಮೊದಲಾದವರು ಇಲ್ಲಿನ ಸಂಸ್ಕೃತಿಯನ್ನು ರಾಷ್ಟ್ರವ್ಯಾಪಿ ಪರಿಚಯಿಸಿ ಖ್ಯಾತಿ ಹೊಂದಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಯುವಜನತೆ ಪ್ರಾಚೀನ ಜಾನಪದ ಕಲೆಗಳನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯತ್ತ ಸಾಗುತ್ತಿರುವುದು ನೋವಿನ ಸಂಗತಿ ಎಂದ ಅವರು, ಯುವಜನತೆ ಜಾನಪದ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ಹೇಳಿದರು. ಸಾನಿದ್ಯ ವಹಿಸಿದ್ದ ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ಶರಣು ಗುರೂಜಿ ಮಾತನಾಡಿ ಪ್ರತಿಯೊಬ್ಬರು ಸ್ವಾವಲಂಬಿ ಮತ್ತು ಜವಾಬ್ದಾರಿಯುತ ಅರ್ಥಪೂರ್ಣ ಮೌಲ್ಯಾಧಾರಿತ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕು ಆಗ ಮಾತ್ರ ಅದಕ್ಕೆ ಮೌಲ್ಯ ಹೆಚ್ಚುತ್ತದೆ. ಯಾವುದೇ ಸಂಸ್ಕೃತಿಯಾಗಲಿ ಅದರಲ್ಲಿ ಉತ್ತಮ ಮೌಲ್ಯಗಳಿದ್ದಲ್ಲಿ ಅದನ್ನು ಮೈಗೂಡಿಸಿಕೊಂಡು ಆದರ್ಶ ಜೀವನವನ್ನು ನಡೆಸಬೇಕು, ಕುವೆಂಪು, ಶಿಶುನಾಳ ಷರೀಫ್, ಕನಕದಾಸರು ಜಾನಪದ ಶೈಲಿಯಲ್ಲಿ ರಚಿಸಿರುವ ಗೀತೆಗಳನ್ನು ಅವರು ಹಾಡಿ ಯೋಗ, ಧ್ಯಾನ ಮೊದಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ವಿಚಾರಗಳ ಬಗ್ಗೆ ತಿಳಿಸಿದರು.ಆರಕ್ಷಕ ವೃತ್ತ ನಿರೀಕ್ಷಕ ಶಿವಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳ ತಮ್ಮ ಮಣ್ಣಿನಿಂದ ಸೌಂದರ್ಯದಿಂದ ಉದ್ಭವಿಸುವ ಜಾನಪದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕೆಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೈ.ನಟರಾಜ್, ಉಪನ್ಯಾಸಕ ಎಲ್.ವಿಜಯ್, ಕೃಷ್ಣಮೂರ್ತಿ, ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಅಬ್ದುಲ್‌ನಜೀರ್, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಜಿ.ವಿ.ವಿಶ್ವನಾಥ್,  ನಾಗರಾಜ್ ಹಲವು ಗಣ್ಯರು ಹಾಜರಿದ್ದರು.
ತಾಲೂಕು ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ ಖಂಡಿಸಿ ಪ್ರತಿಭಟನೆ
ಕೋಲಾರ: ತಾಲೂಕು ಕಚೇರಿಯಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಅಡಚಣೆ ಆಗುತ್ತಿದೆ ಎಂದು ರೈತರು ಪ್ರತಿಭಟನೆ ನಡೆಸಿದರು. ಕಳೆದ ಶುಕ್ರವಾರದಿಂದಲೂ ತಾಲೂಕು ಕಚೇರಿಯಲ್ಲಿ ವಿದ್ಯುತ್ ಸ್ಥಗಿತದಿಂದಾಗಿ ರೈತರು ತಮಗೆ ಬೇಕಾದ ದಾಖಲೆಗಳನ್ನು ಪಡೆಯಲಾಗುತ್ತಿಲ್ಲ. ಕರೆಂಟ್ ಇಲ್ಲದೆ ಕಂಪ್ಯೂಟರ್ ಕೆಲಸ ಮಾಡುತ್ತಿಲ್ಲವೆಂದು ತಾಲೂಕು ಕಟೇರಿಯಲ್ಲಿನ ಭೂ ದಾಖಲಾತಿ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ. ದೂರದ ಊರುಗಳಿಂದ ಬರುವ ರೈತರಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ರೈತರು ಹಾಗೂ ಸಾರ್ವಜನಿಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿಯಲ್ಲಿ ಯುಪಿಎಸ್ ವ್ಯವಸ್ಥೆ ಮಾಡಿಕೊಳ್ಳಬೇಕು, ರೈತರಿಗೆ ಸಕಾಲಕ್ಕೆ ದಾಖಲೆಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜಸ್ವ ನಿರೀಕ್ಷಕ ನಾಗರಾಜ್ ಅವರು ರೈತರ ಸಮಸ್ಯೆ ಅರಿತು ತಕ್ಷಣ ಬೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿ ಕರೆಂಟ್ ಬರುವಂತೆ ಮಾಡುವ ಮೂಲಕ ರೈತರನ್ನು ಸಮಾಧಾನ ಪಡಿಸಿದರಲ್ಲದೆ, ಯುಪಿಎಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ತಣ್ಣಗಾಯಿತು.
'ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ'
ಬಾಗೇಪಲ್ಲಿ: ಕರ್ನಾಟಕದ ರಕ್ಷಣೆಯೆಂದರೆ ಕೇವಲ ಭಾಷೆಯ ರಕ್ಷಣೆಯಲ್ಲ. ಕನ್ನಡಿಗರ ರಕ್ಷಣೆ, ಹಿತ ಕಾಪಾಡುವುದಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ತಿಳಿಸಿದರು. ಕರವೇ(ಶಿವರಾಮೇಗೌಡ ಬಣದ) ವತಿಯಿಂದ ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ 58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿನ ಜಲ, ನೆಲ, ಭಾಷೆಗೆ ಧಕ್ಕೆ ಉಂಟಾದಾಗ ವೀರ ಸೈನಿಕರಂತೆ ಕರವೇ ಕಾರ್ಯಕರ್ತರು ಹಾಗೂ ಕನ್ನಡಿಗರು ಹೋರಾಟ ನಡೆಸುವ ಮೂಲಕ ನಮ್ಮ ನಾಡಿನ ಭಾಷೆ, ಜಲ ಮತ್ತು ನೆಲದ ರಕ್ಷಣೆಗೆ ನಿಲ್ಲುತ್ತಾರೆ ಎಂದರು. ನಮ್ಮ ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಮ್ಮನ್ನು ಆಳುವ ಸರ್ಕಾರಗಳು ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ನಮ್ಮ ಕಾರ್ಯಕರ್ತರು ರೈತರಿಗೆ ಅಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವುದೇ ನಿಜವಾದ ಕರ್ನಾಟಕವನ್ನು ರಕ್ಷಣೆ ಮಾಡುವುದು ಎಂದರು. ಕರವೇ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಚಲಪತಿ, ತಾಲೂಕು ಸಮಿತಿಯ ಅಧ್ಯಕ್ಷ ವೆಂಕಟೇಶ್, ವಕೀಲರಾದ ಸುಬ್ಬಾರೆಡ್ಡಿ, ದಾನಿ ಜ್ಯೋತಿಮಾಜಿ ರೆಡ್ಡಿ, ಪಾಚೇಪಲ್ಲಿ ನಾಗರಾಜರೆಡ್ಡಿ, ಕರವೇ ಮುಖಂಡರಾದ ತಿಪ್ಪನ್ನ, ಚೆನ್ನಮ್ಮ, ಗಂಗರಾಜು ಇದ್ದರು.
ಮಂಚೇನಹಳ್ಳಿಯಲ್ಲಿ ಉರುಸ್
ಗೌರಿಬಿದನೂರು: ಮಂಚೇನಹಳ್ಳಿಯ ತೋಡೆಭಾವಿ ರಸ್ತೆ ಉತ್ತರ ಪಿನಾಕಿನಿ ನದಿ ದಡದ ದರ್ಗಾದ ನುರಾನಿ-ಚಮನ್ ಹಜರತ್- ಉರುಸ್-ಏ-ನಜೀರ್‌೤ಾ-ಬಾಬಾರ ಖಾದ್ರಿ (ರಾ.ಅ)ಉತ್ಸವ ನೆಡೆಯಿತು ಹಿಂದೂ-ಮುಸ್ಲಿಂ ಭಾವ್ಯಕ್ಯತೆಯೊಂದಿಗೆ ಆಚರಿಸಲಾಯಿತು.   ಗಂಧದ ಹೂವಿನಿಂದ ಅಲಂಕರಿಸಿದ ನಾಲ್ಕು ಕುದುರೆಗಳ ರಥದಲ್ಲಿಗಂಧವನ್ನು ಹೊತ್ತು ಕಾರ್ಯಕ್ರಮಕ್ಕೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ನೆಡೆಯಿತು, ಉರುಸ್-ಎ-ಅಕ್ಬರ್, ಮತ್ತು ಸೈಯದ್ ಮಹಬೂಬ್‌ಬಾಷ-ಖಾದ್ರಿ  ನಿವಾಸದಿಂದ ಮೆರವಣಿಗೆ ನೆರವೇರಿತು. ಉರುಸ್‌ನಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಸಿಹಿ- ಅನ್ನದಾನ ಕಾರ್ಯಕ್ರಮ ರಾತ್ರಿ 10 ಕವಾಲಿ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉರುಸ್-ಏ-ಅಕ್ಬ ರ್, ಸೈಯದ್, ಗಂಗಾಧರಪ್ಪ ಸ್ವಾಮಿ, ಮಕ್ತಯಾರ್ ಅಹ್ಮದ್, ಮೋಹನ್, ಮಂಜುನಾಥ್, ಸುರೇಶ್, ಹರೀಶ್,ಅನಿಲ್ ಉಪಸ್ಥಿತರಿದ್ದರು.
'ಸಮಾನತೆ ಕನಸು ಕಂಡ ಅಂಬೇಡ್ಕರ್‌'
ಗೌರಿಬಿದನೂರು: ಭಾರತಕ್ಕೆ ಸಂವಿಧಾನ ರಚಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಡಾ. ಅಂಬೇಡ್ಕರ್ ಮಹಾನ್ ಚಿಂತಕ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಎಂದು ಅಭಿಪ್ರಾಯಪಟ್ಟರು. ಅವರು ಪಟ್ಟಣದ ಪುರಸಭೆಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ವತಿಯಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೋಷಿತರ ದಲಿತರ ಉದ್ಧಾರಕ್ಕಾಗಿ ಅಂಬೇಡ್ಕರ್  ಹಗಲಿರುಳು ದುಡಿದ ಮೇಧಾವಿ ಹಾಗೂ ಸಂವಿಧಾನದ ಮೂಲಕ ಶೋಷಿತರಿಗೆ ಸಮಾನತೆ ಸಿಗಬೇಕೆಂಬ ಕನಸು ಕಂಡವರು ಎಂದು ತಿಳಿಸಿದರು.
ಮಾಜಿ ಶಾಸಕಿ ಜ್ಯೋತಿರೆಡ್ಡಿಗೆಮಾತೃ ವಿಯೋಗ
ಗೌರಿಬಿದನೂರು: ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ ಅವರ ತಾಯಿ ಭಾರತೀ ದೇವಿ ದೀರ್ಘ ಕಾಲದ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಾಸಕರಾದ ಎನ್.ಸಿ. ನಾಗಯ್ಯರೆಡ್ಡಿರವರ ಮಗಳಾದ ಭಾರತೀದೇವಿ ಅವರಿಗೆ ಪತಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ವರದಾರೆಡ್ಡಿ, ಇಬ್ಬರು ಗಂಡು, ಮೂವರು ಪುತ್ರಿಯರು ಇದ್ದಾರೆ. ಅವರ ನಿಧನಕ್ಕೆ ತಾಲೂಕು ಜೆಡಿಎಸ್ ಮುಖಂಡ ಎಸ್.ಎಚ್. ಲಕ್ಷ್ಮೀನಾರಾಯಣ್, ಪುರಸಭೆ ಸದಸ್ಯರಾದ ಅನಂತ್‌ರಾಜು, ಮಂಜುನಾಥ್, ಗಂಗರತ್ನಮ್ಮ, ಸುಭಾನ್, ಮುನ್ನ, ರತ್ನಯ್ಯ, ಹೊಸೂರು ಹರಿ, ತಾ.ಪಂ. ಮಾಜಿ ಸದಸ್ಯರಾದ ಜಾಮೀನ್‌ರಾಜಾ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೂಜು: ಐವರ ಬಂಧನ, ನಗದು ವಶ
ಗುಡಿಬಂಡೆ: ತಾಲೂಕಿನ ನುಲಿಗುಂಬ ಗ್ರಾಮದ ಕೆರೆ ಅಂಗಳದಲ್ಲಿ ಜೂಜಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀನಿವಾಸ, ಆದಿನಾರಾಯಣಪ್ಪ, ಶಂಕರರೆಡ್ಡಿ, ಕೃಷ್ಣಪ್ಪ, ಹರಿಪ್ರಸಾದ್ ಎಂದು ಹೇಳಲಾಗಿದೆ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 8 ಸಾವಿರ ನಗದು, 2 ಮೊಬೈಲ್ ಮತ್ತು 2 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಶಿವಕುಮಾರ್, ಉಪನೀರಿಕ್ಷಕ ನರಸಿಂಹಮೂರ್ತಿ ಹಾಗೂ ಪೇದೆಗಳಾದ ಕರಿಬಾಬು, ಮುರಳಿ, ಅಶ್ವತ್, ಚಿದಾನಂದ, ಜೂಲಪ್ಪ ಪಾಲ್ಗೊಂಡಿದ್ದರು.
ವಿಷ ಸೇವಿಸಿ ಆತ್ಮಹತ್ಯೆ
ಗುಡಿಬಂಡೆ: ಹೊಟ್ಟೆನೋವು ತಾಳಲಾರದೇ ವಿಷ ಕುಡಿದು ವ್ಯಕ್ತಿಯೊಬ್ಬ ಸಾವಿಗೆ ಶರಣಾದ ಘಟನೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ನರಸಿಂಹಮೂರ್ತಿ (27) ಎಂದು ಹೇಳಲಾಗಿದ್ದು, ವೃತ್ತಿಯಲ್ಲಿ ಚಾಲಕನಾಗಿದ್ದ, ಕಳೆದ 14 ರ ಸಂಜೆ ತನ್ನ ತೋಟದ ಮನೆಗೆ ತೆರಳಿದ್ದ ಈತ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಬೆಳೆಗೆ ಸಿಂಪಡಿಸಲು ಇರಿಸಿದ್ದ ಕೀಟನಾಶಕವನ್ನು ಸೇವಿಸಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಮೃತನ ಹೆಂಡತಿ ಹಾಗೂ ಸಂಬಂಧಿಕರು ಈತನನ್ನು ಆಸ್ಪೆತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆದಲ್ಲೇ ಅಸುನೀಗಿದ್ದಾನೆ. ಈ ಸಂಬಂಧ ಪತ್ನಿ ರಂಜನಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಗುಡಿಬಂಡೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
5 ಜೂಜುಕೋರರ ಸೆರೆ
ಚಿಂತಾಮಣಿ: ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿ ಅವರಿಂದ ಸಾವಿರಾರು ರು. ನಗದು ವಶಪಡಿಸಿಕೊಂಡಿರುವ ಘಟನೆ ನಡುಂಪಲ್ಲಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಯತ್ನ: ತಾಯಿ, ಮಗಳು ಸಾವು
ಬಂಗಾರಪೇಟೆ: ಕುಡುಕ ಗಂಡನ ಕಾಟ ತಾಳಲಾರದೆ ಪತ್ನಿಯೊಬ್ಬಳು ತನ್ನ ಇಬ್ಬರ ಮಕ್ಕಳೊಂದಿಗೆ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಅದೃಷ್ಟಾವತ್ ಒಂದು ಮಗು ಸಾವಿನಿಂದ ಪಾರಾಗಿದ್ದು ತಾಯಿ ಮಗಳು ಮೃತಪಟ್ಟಿದ್ದಾರೆ. ಇಲ್ಲಿಗೆ ಸಮೀಪದ ಬೆಂಗನೂರು ಗ್ರಾಮದ ನಾಗರಾಜ್ ಎಂಬುವರ ಪತ್ನಿ ಭಾರತಿ 25 ಹಾಗೂ ಮಗಳು ಅರ್ಶಿನಿ 2 ಎಂಬುವರೆ ಮೃತಪಟ್ಟವರಾಗಿದ್ದು. ಆಂಧ್ರ ಪ್ರದೇಶದ ಕುಪ್ಪಂ ನಿವಾಸಿಯಾದ ಭಾರತಿರನ್ನು 5ವರ್ಷಗಳ ಹಿಂದಷ್ಟೇ ಬೆಂಗನೂರು ಗ್ರಾಮದ ನಾಗರಾಜ್ ಅವರೊಂದಿಗೆ ವಿವಾಹವಾಗಿತ್ತು. ಗಂಡ ನಾಗರಾಜ್ ಇಟ್ಟಿಗೆ ತಯಾರಿಕೆ ಕೆಲಸಕ್ಕೆ ಹೋಗುತ್ತಿದ್ದು ನಂತರ ಪ್ರತಿದಿನ ಕುಡಿದು ಮನೆಗೆ ಬಂದು ಸಂಸಾರಕ್ಕೆ ಹಣ ನೀಡದೆ ಸಣ್ಣಪುಟ್ಟಕ್ಕೆಲ್ಲ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿರುವ ಪತ್ನಿ ಭಾರತಿ, ಕಳೆದ ರಾತ್ರಿ ಸಹ ಗಂಡ ಕುಡಿದು ಬಂದು ಗಲಾಟೆ ಮಾಡಿದ ಎನ್ನಲಾಗಿದ್ದು ಇದರಿಂದ ನೊಂದ ಭಾರತಿ ಕುಡುಕ ಗಂಡನೊಂದಿಗೆ ಬಾಳುವ ಬದಲು ತನ್ನ ಇಬ್ಬರು ಮಗಳೊಂದಿಗೆ ಸಾಯುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದು ಗಂಡನ ಎದುರೇ ಭಾರತಿ, ಮಗಳಾದ ಅರ್ಶಿನಿ ಹಾಗೂ 4ವರ್ಷದ ಮಗ ಹರ್ಷಗೆ ಸೀಮೆಎಣ್ಣೆ ಸುರಿದು ಬೆಂಕಿ ಹಂಚಿಕೊಂಡರು.  ಈ ಘಟನೆ ತಡೆಯಲು ನಾಗರಾಜ್ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಪತ್ನಿ ಸ್ಥಳದಲ್ಲೇ ಮೃತಪಟ್ಟಳು, ಮಗಳನ್ನು ಆಸ್ಪತ್ರೆಗೆ ಸಾಗಿರುವ ದಾರಿ ಮಧ್ಯ ಅಸುನೀಗಿದಳು.  ಮಗ ಹರ್ಷ ಪ್ರಾಣಾಪಾಯದಿಂದ ಪಾರಾಗಿದ್ದು ಬೆಂಕಿ ಅನಾಹುತ ತಡೆಯಲು ಹೋಗಿ ನಾಗರಾಜ್ ಸಹ ಗಂಭೀರವಾಗಿ ಗಾಯಗೊಂಡಿದ್ದು ತಂದೆ ಮಗ ಇಬ್ಬರೂ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದೇವತೆಗಳ ಪಲ್ಲಕ್ಕಿ ಸಂಗಮೋತ್ಸವ
ಟೇಕಲ್: ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ವರ್ಷವಿಡೀ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅಂಥ ಸನ್ನಿವೇಶ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಮಂಜುನಾಥಗೌಡ ತಿಳಿಸಿದರು. ಅವರು ಹುಲಿದೇನಹಳ್ಳಿ ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ಸೇವಾ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ 58ನೇ ಕನ್ನಡ ರಾಜ್ಯೋತ್ಸವ ಹಾಗೂ ದೇವತೆಗಳ ಪಲ್ಲಕ್ಕಿ ಸಂಗಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿರಾಮು, ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಜಿಪಂ ಮಾಜಿ ಸದಸ್ಯ ಹನುಮಂತಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್.ವಿ.ಚಂದ್ರಶೇಖರಗೌಡ, ಗ್ರಾಪಂ ಅಧ್ಯಕ್ಷ ಎಚ್.ಎಂ.ರವೀಂದ್ರ, ತಾಪಂ ಸದಸ್ಯ ಆರ್.ಆನಂದ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement