ಗ್ರಾಪಂ ಕಚೇರಿಗೆ ಬೆಂಕಿ; ಗ್ರಾಮಸ್ಥರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಪಂ ಕಚೇರಿಗೆ ಕಡತಗಳನ್ನು ಇಲ್ಲದಂತೆ ಮಾಡಲು ಬೆಂಕಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗ್ರಾಪಂ ಕಾರ್ಯದರ್ಶಿ ಮತ್ತು ಗುಡಿಬಂಡೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ಸೋಮೇನಹಳ್ಳಿ ಗ್ರಾಮಸ್ಥರು ಜಿಪಂ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿದರು.
ಸೋಮೇನಹಳ್ಳಿ ಗ್ರಾಪಂ ಕಚೇರಿಯಲ್ಲಿ ವ್ಯಾಪಾರ ಭ್ರಷ್ಟಾಚಾರ ನಡೆಸಿ ಹಣ ಲೂಟಿ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಯೊಬ್ಬರು ಸಹ ಭಾಗವಹಿಸಿದ್ದು ಡಿ.16ರಂದು ಗ್ರಾಪಂ ಕಚೇರಿಗೆ ತನಿಖಾ ತಂಡ ಬರುತ್ತದೆ ಎಂಬ ದುರುದ್ದೇಶದಿಂದ ಬೆಂಕಿ ಹಾಕಲಾಗಿದೆ. ಈ ಮೂಲಕ ಕಡತಗಳನ್ನು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೇ ಸ್ಥಳಕ್ಕೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಬೇಕು. ತಕ್ಷಣ ಗುಡಿಬಂಡೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮತ್ತು ಗ್ರಾಪಂ ಕಾರ್ಯದರ್ಶಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದಲ್ಲದೇ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಸಿಇಒ ನೀಲಾ ಮಂಜುನಾಥ್ ಬಂದು, ಸಂಬಂಧಪಟ್ಟ ಗ್ರಾಪಂ ಕಾರ್ಯದರ್ಶಿಯನ್ನು ಅಮಾನತು ಮಾಡಲಾಗುವುದು. ತಾಪಂ ಕಾರ್ಯ ನಿರ್ವಹಣಾಧಿಕಾರಿಯನ್ನು ಅಮಾನತು ಮಾಡುವ ಅಧಿಕಾರ ತಮಗಿಲ್ಲ. ಸರ್ಕಾರಕ್ಕೆ ಅವರ ವಿರುದ್ಧ ಪತ್ರ ಬರೆಯುತ್ತೇನೆ. ಅಲ್ಲಿಯವರೆಗೂ ಗುಡಿಬಂಡೆಗೆ ಬೇರೆ ಅಧಿಕಾರಿಯನ್ನು ನೇಮಿಸುವುದಾಗಿ ಭರವಸೆ ನೀಡಿದರು. ಎಂ.ವಿ.ಕೃಷ್ಣಪ್ಪ, ಸಾವಿತ್ರಮ್ಮ, ಚಂದ್ರಪ್ಪ ಇದ್ದರು.