ಮೈ ನಡುಗಿಸುವ ಚಳಿ ತಾಳಲಾರದೇ ನಾಲ್ಕು ತಿಂಗಳ ಗಂಡು ಮಗು ಸಾವು
ಚಿಕ್ಕಬಳ್ಳಾಪುರ: ಮೈ ನಡುಗಿಸುವ ಚಳಿಯನ್ನು ತಾಳಲಾರದೇ ನಾಲ್ಕು ತಿಂಗಳ ಗಂಡು ಮಗುವೊಂದು ಮೃತಪಟ್ಟಿದೆ. ಇಲ್ಲಿನ ಬಸಪ್ಪನ ಛತ್ರದ ನಿವಾಸಿ ಆಯಿಷಾ ಎಂಬುವರ ಜಬೀ ಮೃತಪಟ್ಟ ದುರ್ದೈವಿ ಮಗುವಾಗಿದೆ.
ನಗರದ ಹೃದಯ ಭಾಗದಲ್ಲಿರುವ ಬಸಪ್ಪನ ಛತ್ರದಲ್ಲಿ ಅನೇಕ ವರ್ಷಗಳಿಂದ ವಾಸ ಮಾಡಿಕೊಂಡಿದವರನ್ನು ನಗರಸಭೆಯ ಕಚೇರಿ ನಿರ್ಮಾಣಕ್ಕಾಗಿ ಒಕ್ಕಲೆಬ್ಬಿಸಿ ಕಂದವಾರ ಸಮೀಪದ ಪ್ರದೇಶದಲ್ಲಿ ತಗಡು ಗುಡಾರವನ್ನು ನಿರ್ಮಿಸಿಕೊಡಲಾಗಿದೆಯೇ ಹೊರತು ಈ ಜನರಿಗೆ ಜಿಲ್ಲಾಡಳಿತ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿನ ಜನರು ಸೌಕರ್ಯಗಳಿಂದ ವಂಚಿತರಾಗಿ, ನಗರಕ್ಕೆ ದೂರವಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದಾರೆ. ಚಿಂದಿ ಪೇಪರ್ ಆಯುವ, ಕಬ್ಬಿಣ, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡುವ ಇವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿಕೊಂಡು ಬರುತ್ತಿದ್ದು ಜಿಲ್ಲಾಡಳಿತ ಮಾತ್ರ ವಸತಿ ಸೌಲಭ್ಯವನ್ನು ಒದಗಿಸಲು ಇನ್ನೂ ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿಯೇ ಕಾಲ ಕಳೆಯುತ್ತಿದೆ.
ಮೂಲಭೂತ ಸೌಲಭ್ಯಗಳಿಂದ ದೂರ ಉಳಿದು ಕಂದವಾರ ಸಮೀಪ ವಾಸ ಮಾಡುತ್ತಿರುವ ನಿರಾಶ್ರಿತರ ಪಾಡು ಹೇಳ ತೀರದಾಗಿದೆ. ಕಳೆದ 6 ತಿಂಗಳಲ್ಲಿ ಅನಾರೋಗ್ಯಕ್ಕೆ 8 ಮಕ್ಕಳು ಮತ್ತು ಐವರು ವೃದ್ಧರು ಮೃತಪಟ್ಟಿದ್ದಾರೆ.
ಇತ್ತೀಚೆಗೆ ಮೈ ನಡುಗಿಸುವ ಚಳಿಗೆ ಮೂವರು ಮಕ್ಕಳ ಮೃತಪಟ್ಟಿದ್ದು ಸೋಮವಾರ ಆಯಿಷಾಳ ನಾಲ್ಕು ವರ್ಷದ ಮಗ ಜಬೀ ಸಾವನ್ನಪ್ಪಿದ್ದಾನೆ. ಇದ್ದ ಗಂಡು ಮಗುವನ್ನು ಕಳೆದುಕೊಂಡ ಆಯಿಷಾಳ ಕುಟುಂಬಕ್ಕೆ ದು:ಖ ಆವರಿಸಿದೆ.
ಊರಿನ ಆಚೆ ಹಾಕಿರುವ ಕಸದ ರಾಶಿಯ ನಡುವೆ ಪ್ರಾಣಿಗಳು ವಾಸ ಮಾಡುವಂತೆ ಮೂರ್ನಾಲ್ಕು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ.ಸೊಳ್ಳೆಗಳ ಕಾಟ, ಕೊಳಚೆ ನೀರಿನ ಸಮಸ್ಯೆ, ಕ್ರಿಮಿ ಕೀಟಗಳು ಮತ್ತು ಹಾವುಗಳ ಒಳ ಬರುವ ಭೀತಿ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿವೆ.ನಮಗೆ ಮೂಲಭೂತ ಸೌಲಭ್ಯವನ್ನು ದೊರಕಿಸಿಕೊಟ್ಟಿಲ್ಲ.ಕೇವಲ ಭರವಸೆಯನ್ನು ನೀಡಿ ಕಾಲ ತಳ್ಳಿಕೊಂಡು ಹೋಗಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಜಾಬೀರ್ ಆರೋಪಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಮಿತ್ರಣ್ಣ, ಮಗು ಮೃತಪಟ್ಟಿರು ಕಂದವಾರ ಸಮೀಪ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ಮಗುವಿನ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿ ಸ್ಥಳೀಯ ವಾತಾವರಣವನ್ನು ಗಮನಿಸಿದರು.ಚಳಿಯನ್ನು ತಾಳಲಾರದೇ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆಯಾದರೂ ಶವಪರೀಕ್ಷೆ ನಡೆಸಿ ದೃಢಪಡಿಸಬೇಕು ಎಂದು ತಿಳಿಸಿದರು.