ಸಾವಿರದೊಂದು ಮುಂಬತ್ತಿ ಹಚ್ಚಿ ನಮನ
ಮಾಲೂರು: ಇತ್ತೀಚೆಗೆ ನಿಧನರಾದ ದಕ್ಷಿಣ ಅಫ್ರಿಕಾ ಮಾಜಿ ಅಧ್ಯಕ್ಷ ಮಂಡೇಲಾ ಹಾಗೂ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ಗೌರವಾರ್ಥ ಇಲ್ಲಿನ ದಲಿತ ಸಿಂಹ ಸೇನೆ ಕಾರ್ಯಕರ್ತರು ಇಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಸಾವಿರದೊಂದು ಮುಂಬತ್ತಿ ಹಚ್ಚಿ ನಮನ ಸಲ್ಲಿಸಿದರು.
ಸಂಘದ ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಮಾತನಾಡಿ ಜಾತಿಭೇದಕ್ಕಾಗಿ ದೇಶದಲ್ಲಿ ಡಾ.ಅಂಬೇಡ್ಕರ್ ಹೋರಾಟ ನಡೆಸಿದಂತೆ ದಕ್ಷಿಣ ಅಫ್ರಿಕಾದಲ್ಲಿ ವರ್ಣಭೇಧ ನಿವಾರಣೆಗಾಗಿ ಹೋರಾಟ ಮಾಡಿದ ಮಂಡೇಲಾ ರವರು ಜೀವನ ವೈಖರಿ ಎಲ್ಲರಿಗೂ ಆದರ್ಶವಾಗಿದೆ ಎಂದರು.
ಶೋಷಿತರ ಬಗ್ಗೆ ಮಿಡಿತ ಹೊಂದಿದ್ದ ಜನಾನುರಾಗಿ ಶ್ರೀಕಂಠದತ್ತ ಒಡೆಯರ್ ನಿಧನರಾಗಿ ನಮ್ಮನ್ನು ಅನಾಥನಾಗಿ ಮಾಡಿದೆ ಎಂದರು.ಈ ಇಬ್ಬರು ಮುಖಂಡರು ಒಂದೇ ತಿಂಗಳಲ್ಲಿ ನಮ್ಮನ್ನಗಲಿ ಹೋಗಿರುವುದು ದು:ಖಕರ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರ ನಂಬಿಕೆಯನ್ನು ಜೀವಂತವಾಗಿ ಇಡುವಂತೆ ಮಾಡಬೇಕಾಗಿದೆ ಎಂದು ಹೇಳಿದರು. ಭುವನಹಳ್ಳಿ ಚೆನ್ನಪ್ಪ,ನಾರಾಯಣಸ್ವಾಮಿ,ವೆಂಕಟೇಶ್,ಮುನಿಕೃಷ್ಣಪ್ಪ ಇದ್ದರು.