ಕಾಟಾಚಾರಕ್ಕೆಂಬಂತೆ ನಡೆದ ಪ್ರತಿಭಾ ಕಾರಂಜಿ
ಮಾಲೂರು: ಗ್ರಾಮೀಣ ಪ್ರತಿಭೆಗಳನ್ನು ಹೊರತರುವ ಉದ್ದೇಶವುಳ್ಳ ಪ್ರತಿಭಾ ಕಾರಂಜಿಯನ್ನು ಇಲ್ಲಿನ ಶಿಕ್ಷಣ ಇಲಾಖೆಯವರು ಬುಧವಾರ ಕಾಟಚಾರಕ್ಕಾಗಿ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವರ್ತನೆಯು ಸಾರ್ವಜನಿಕರ ತೀವ್ರ ಟೀಕೆಗೆ ಒಳಗಾಗಿದೆ.
ಶಾಲಾ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಬೆಳಕು ಚೆಲ್ಲಲು ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿದೆ. ಆದರೆ ಇಲ್ಲಿನ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪ್ರತಿಭೆಯನ್ನು ತೋರಿಸುವ ವೇದಿಕೆ ನಿರ್ಮಿಸಿತ್ತೆ ಹೊರತು ಅದನ್ನು ವಿಕ್ಷೀಸಲು ಕೊನೆ ಪಕ್ಷ ಮಕ್ಕಳ ಪೋಷಕರನ್ನು ಆಹ್ವಾನಿಸಿದೆ ಮಕ್ಕಳಲ್ಲಿ ನಿರಾಶೆ ಮೂಡುವಂತೆ ಮಾಡಿದೆ.
ಮಧ್ಯಾಹ್ನ 1 ಗಂಟೆವರೆಗೂ ಕಾದ ಮಕ್ಕಳು: ಶಾಸಕರು ಕಾರ್ಯಕ್ರಮ ಉದ್ಘಾಟನೆ ಮಾಡಿ ಹೊರಟ ನಂತರ ಇಡೀ ಸಭಾಂಗಣ ಖಾಲಿ ಹೊಡೆಯುತ್ತಿದ್ದು, ಶಾಲಾ ಮಕ್ಕಳು ಖಾಲಿ ಖುರ್ಚಿಗಳ ಮುಂದೆ ತಮ್ಮ ಪ್ರತಿಭೆ ತೋರಿಸುವಂತಾಯಿತು. ತಾಲೂಕಿನ ವಿವಿಧ ಶಾಲೆಗಳಿಂದ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಿಗ್ಗೆ 9 ಗಂಟೆಗೆ ಬಂದ ಬಣ್ಣ ಹಚ್ಚಿಕೊಂಡಿದ್ದ ಮಕ್ಕಳು ಕಾರ್ಯಕ್ರಮ ಉದ್ಘಾಟನೆಗೊಂಡ ಮಧ್ಯಾಹ್ನ ಒಂದು ಗಂಟೆ ವರೆಗೂ ಕಾಯಬೇಕಾಗಿತ್ತು.
ಸುಸ್ತಾಗಿದ್ದ ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಸಹ ಇರಲಿಲ್ಲ.ಈ ಬಗ್ಗೆ ಶಿಕ್ಷಣ ಇಲಾಖೆಯ ಲೆಕ್ಕಾಧಿಕಾರಿ ವಿಜಯ ಕುಮಾರ್‌ರನ್ನು ಪ್ರಶ್ನಿಸಿದಾಗ ಈ ಕಾರ್ಯಕ್ರಮಕ್ಕಾಗಿ 90 ಸಾವಿರ ರು.ಬಿಡುಗಡೆಯಾಗಿದೆ. ಇದರಲ್ಲಿ ಬಹುಮಾನಕ್ಕಾಗಿ 65 ಸಾವಿರ ರು. ವ್ಯಯಮಾಡಲಾಗಿದೆ. ಉಳಿದ 25 ಸಾವಿರ ರು.ಗಳಲ್ಲಿ ಮೈಕ್,ಬ್ಯಾನರ್ ಹಾಗೂ ಊಟಕ್ಕಾಗಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರನ್ನೂ ದೂರವಿಟ್ಟ ಇಲಾಖೆ: ವರ್ಷದ ಅತಿದೊಡ್ಡ ಕಾರ್ಯಕ್ರಮವಾದ ಪ್ರತಿಭಾ ಕಾರಂಜಿಗೆ ಆಹ್ವಾನ ಪತ್ರಿಕೆ ಮುದ್ರಿಸದ ಶಿಕ್ಷಣ ಇಲಾಖೆಯು ಯೋಜನೆಯ ಮುಖ್ಯ ಉದ್ದೇಶವಾಗಿರುವ ಪ್ರಚಾರಕ್ಕೆ ಸಹ ಒತ್ತು ನೀಡದೆ ಪತ್ರಕರ್ತರನ್ನು ದೂರವಿಟ್ಟಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಯಲ್ಲಮ್ಮ ಪತ್ರಕರ್ತರೊಡನೆ ಮಾತನಾಡಿ ತಾಲೂಕಿನ ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಭಾಗವಹಿಸಿರುವ ಈ ಕಾರ್ಯಕ್ರಮವನ್ನು ನಾಲ್ಕು ಗೋಡೆಗಳ ಮಧ್ಯೆ ಖಾಲಿ ಖುರ್ಚಿಗಳ ಮಂದೆ ಮಾಡಿಸುವ ಬದಲು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಗಳ ಸಹಕಾರ ಪಡೆದು ಮೈದಾನದಲ್ಲಿ ದೊಡ್ಡ ಪೆಂಡಾಲ್‌ನಲ್ಲಿ ಕಾರ್ಯಕ್ರಮ ಆಯೋಜಸಿದ್ದರೆ, ಮಕ್ಕಳ ಪ್ರತಿಭೆಯನ್ನು ಪೋಷಕರೊಂದಿಗೆ ಸಾರ್ವಜನಿಕರೂ ವೀಕ್ಷಿಸುತ್ತಿದ್ದರು. ಈ ಬಗ್ಗೆ ಕಾರ್ಯಕ್ರಮದ ಭಾಷಣದಲ್ಲಿ ಬಿಇಓ ರವರನ್ನು ತರಾಟೆ ತೆರೆದುಕೊಂಡಿರುವುದಾಗಿ ತಿಳಿಸಿದ್ದಾರೆ.