ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರತಿಭಾ ಕಾರಂಜಿ: ಚಿಣ್ಣರ ಉತ್ಸಾಹಕ್ಕೆ ತಣ್ಣೀರೆರಚಿದ ಮುಖ್ಯ ಶಿಕ್ಷಕ

Vishwanath S
Updated On : 19 Dec 2013, 1:01 am

ಟೇಕಲ್: ಕೆ.ಜಿ.ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮಕ್ಕಳ ಹಕ್ಕು ಕಿತ್ತುಕೊಂಡು ಅವರ ಪ್ರತಿಭೆಯನ್ನು ವ್ಯಕ್ತಪಡಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ತಡೆಯೊಡ್ಡಿದ ಘಟನೆ ಬುಧವಾರ ನಡೆದಿದೆ.
ಘಟನೆ ವಿವರ: ಕೆ.ಜಿ.ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ಕೆ.ಜಿ.ಹಳ್ಳಿ ಕ್ಲಸ್ಟರ್ ಮಟ್ಟದಿಂದ ತಾಲೂಕು ಮಟ್ಟಕ್ಕೆ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಆಯ್ಕೆಯಾಗಿದ್ದು ಕೋಲಾಟ, ಜಾನಪದ ನೃತ್ಯ, ಚದ್ಮವೇಷ ಹಾಗೂ ಪುಟಾಣಿ 4ನೇ ತರಗತಿ ವರ್ಷಳಿಂದ ಕಂಠಪಾಠ, ಕಾರ್ತೀಕ್‌ನಿಂದ ಚಿತ್ರಕಲೆ, ಅಜಿತ್‌ಕುಮಾರ್‌ನಿಂದ ರಸಪ್ರಶ್ನೆ ಹೀಗೆ ಸುಕನ್ಯಾ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು.
ಅದರಂತೆ ಬುಧವಾರ ಮಾಲೂರಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಶಾಲೆಯಿಂದ ಶಿಕ್ಷಕರೊಬ್ಬರ ಜೊತೆಗೂಡಿ ಈ ಮಕ್ಕಳ ತಂಡ ಹೋಗಬೇಕಿತ್ತು. ಅದರಂತೆ ಎಲ್ಲಾ ಮಕ್ಕಳು ತಮ್ಮ ವೇಷ ಭೂಷಣಕ್ಕೆ ಬೇಕಾದ ಸಾಮಗ್ರಿಗಳು, ಗೆಜ್ಜೆ, ಸೀರೆ, ಜಾನಪದ ಉಡುಪುಗಳನ್ನು ತಂದು ಬುಧವಾರ ಮುಂಜಾನೆಯೆ ಮಕ್ಕಳು ಬೇಗ ಬಂದು ಶಿಕ್ಷಕಿ ಸಮೇತ ಶಾಲೆ ಬಳಿ ಬಂದರೆ ಮುಖ್ಯ ಶಿಕ್ಷಕರ ಸುಳಿವೇ ಇಲ್ಲ. ಇದರಿಂದ ಕಾದು ಕುಳಿತ ಮಕ್ಕಳು ಶಾಲೆಯ ಮುಂದೆ ಕುಳಿತು ಪ್ರತಿಭಟಿಸಿದರು
ಉಡಾಫೆ ಉತ್ತರ: ಪುಟಾಣಿ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿ ಶಾಲೆಯ ಮುಂದೆ ಕುಳಿತು ವಿಷಯ ಹೇಳಿ ಅತ್ತರು. ಇದೇ ಸಮಯಕ್ಕೆ ಸರಿಯಾಗಿ ಕ್ಲಸ್ಟರ್ ಸಿಆರ್‌ಪಿ ಮಂಜಪ್ಪ ಬೆಳಿಗ್ಗೆ 10-30ಗೆ ಶಾಲೆಗೆ ಭೇಟಿ ನೀಡಿ ಮುಖ್ಯ ಶಿಕ್ಷಕ ಕೆ.ಎಸ್.ವೆಂಕಟೇಶಪ್ಪ ಬಾರದೆ ಇರುವುದನ್ನು ಗಮನಿಸಿ ತಕ್ಷಣ ಅವರಿಗೆ ಪೋನಾಯಿಸಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ಕಳುಹಿಸಿಕೊಡಿ ಎಂದು ವಿಚಾರಿಸಿದಾಗ ಮುಖ್ಯ ಶಿಕ್ಷಕರು ಉಡಾಫೆ ಉತ್ತರ ನೀಡಲಾಯಿತು.
ಕೊನೆಗೆ ಮುಖ್ಯ ಶಿಕ್ಷಕ ಶಾಲೆಗೆ ಬಂದದ್ದು ಮಧ್ಯಾಹ್ನ 2 ಗಂಟೆಗೆ ಆದಾಗಲೇ ಮಾಲೂರಿನಲ್ಲಿ ಪ್ರತಿಭಾ ಕಾರಂಜಿಯ ಕಾರ್ಯಕ್ರಮ ಅರ್ಧಭಾಗ ಮುಗಿದಿತ್ತು.
ಈ ಬಗ್ಗೆ ಪೋಷಕರು ಮತ್ತು  ಸಿಆರ್‌ಪಿ ಹಾಗೂ ಮಾಧ್ಯಮದವರು ಮುಖ್ಯ ಶಿಕ್ಷಕ ಕೆ.ಎಸ್.ವೆಂಕಟೇಶಪ್ಪನವರ ಬಳಿ ವಿಚಾರಿಸಿದಾಗ ಆತ ಹೇಳಿದ್ದು ನನ್ನಿಂದ ತಪ್ಪಾಗಿದೆ. ಮುಂದೆ ಈ ತಪ್ಪು ಮಾಡದೆ ತಿದ್ದಿ ಕೊಳ್ಳುತ್ತೇನೆ ಎಂದು ಉತ್ತರಿಸಿದರು.
ಆದರೆ ಪ್ರತಿಭಾನ್ವಿತ ಪುಟಾಣಿ ಮಕ್ಕಳ ಗತಿ ಏನು ಇಂತಹ ಕಾರ್ಯಕ್ರಮಗಳಿಂದ ವಂಚಿತರಾಗಲು ಯಾರು ಹೊಣೆ ಮತ್ತು ಪ್ರತಿಭಾಕಾರಂಜಿ ಕಾರ್ಯಕ್ರಮ ಬರುವುದು ವರ್ಷಕ್ಕೊಮ್ಮೆ ಮಾತ್ರ ಎಂಬುದು ಪೋಷಕರ ಆರೋಪ. ಈ ಬಗ್ಗೆ ಮುಖ್ಯ ಶಿಕ್ಷಕರ ಮೇಲೆ ಕ್ರಮಕೈಗೊಳ್ಳಬೇಕೆಂದು ಹಾಗೂ ಘಟನೆ ಬಗ್ಗೆ ಮಕ್ಕಳ ಆಯೋಗಕ್ಕೆ ದೂರು ನೀಡುವುದಾಗಿ ಪೋಷಕರು ತಿಳಿಸಿದ್ದಾರೆ.
ಬಿಇಒ ಪ್ರತಿಕ್ರಿಯೆ: ಘಟನೆ ಬಗ್ಗೆ ಬಿಇಒ ಸುಬ್ರಮಣ್ಯಂ ಪ್ರತಿಕ್ರಿಯಿಸಿದ್ದು  ಮುಖ್ಯ ಶಿಕ್ಷಕರ ವಿರುದ್ಧ ನೋಟಿಸು ಜಾರಿ ಮಾಡಿ ನಂತರ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement