ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬುಡ್ಗ ಜಂಗಮರಿಗೆ ಜಾತಿ ಪತ್ರ ನೀಡದಿದ್ದರೆ ಹೋರಾಟ

Vishwanath S
Updated On : 19 Dec 2013, 1:01 am

ಕ.ಪ್ರ.ವಾರ್ತೆ ,  ಕೋಲಾರ ,  ಡಿ.18
ಭಿಕ್ಷಾಟನೆಯ ಮೂಲಕ ಜೀವನ ಸಾಗಿಸುತ್ತಿರುವ ಬುಡ್ಗ ಜಂಗಮ ಸಮುದಾಯಕ್ಕೆ ಜಾತ್ರಿ ಪ್ರಮಾಣ ಪತ್ರ ನೀಡಲು ಜಿಲ್ಲಾ ಆಡಳಿತ ಸತಾಯಿಸುತ್ತಿದೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ಬುಡ್ಗ ಜಂಗಮಕ್ಕೆ ಸೇರಿದ ಶಾಲಾ ಮಕ್ಕಳು ಮತ್ತು ಪೋಷಕರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹಾಗೂ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬುಧವಾರ ಈ ಇಬ್ಬರು ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಬುಡ್ಗ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಾದ್ಯಂತ ಬುಡ್ಗ ಜಂಗಮಕ್ಕೆ ಸೇರಿದ ಸಾವಿರಾರು ಮಂದಿ ಇದ್ದಾರೆ. ಜಾತಿ ಪ್ರಮಾಣ ಪತ್ರ ಪಡೆಯಲು ಬೇರೆ ಕಡೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೋಲಾರ ಜಿಲ್ಲೆಯಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಸಮಸ್ಯೆ ಹುಟ್ಟು ಹಾಕಿದ್ದಾರೆಂದು ಮಾಜಿ ಸಚಿವ ಲಲಿತಾ ನಾಯಕ್ ಆರೋಪಿಸಿದರು.
ಕಳೆದ 25 ವರ್ಷಗಳ ಹಿಂದೆ ಬುಡ್ಗ ಜಂಗಮವರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರಿಂದ ಇವರಿಗೆ ಜಾತಿ ಪ್ರಮಾಣ ನೀಡಲು ಕಷ್ಟವಾಗಿತ್ತು. ಅನೇಕ ಹೋರಾಟಗಳಿಂದಾಗಿ  ಭಿಕ್ಷಾಟನೆ ಮಾಡುವ ಮೂಲಕ ಜೀವ ಸಾಗಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಸೇರಿದ ಬುಡ್ಗ ಜಂಗಮರಿಗೆ ಅದೇ ಹೆಸರಿನ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ನಿರ್ಧರಿಸಿ ಬೇರೆ ಬೇರೆ ಜಿಲ್ಲೆಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರೂ ಕೋಲಾರದಲ್ಲಿ ಮಾತ್ರ ತದ್ವಿರುದ್ಧವಾಗಿ ಅಧಿಕಾರಿಗಳು ವರ್ತಿಸುತ್ತಿರುವುದು ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ ಎಂದು ಟೀಕಿಸಿದರು.
ವಿವಿಧ ವೇಷಗಳನ್ನು ಧರಿಸಿ ಭಿಕ್ಷೆ ಕೇಳುವ ಈ ಜನರ ಬಳಿ ತಾವು ಇಂತಹದೇ ಜಾತಿಗೆ ಸೇರಿದವರೆಂದು ಹೇಳಿಕೊಳ್ಳುವುದಕ್ಕೆ ಯಾವುದೇ ಆಧಾರ ಇಲ್ಲ.ಹಾಗಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಬುಡ್ಗ ಜಂಗಮರು ಬಳಕೆ ಮಾಡುವ ಭಾಷೆಯನ್ನು ಆಧಾರಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು. ಆದರೆ, ಜಿಲ್ಲಾಧಿಕಾರಿಗಳು ಸಮಸ್ಯೆ ನಿವಾರಣೆಗೆ ಬದಲು ಕಗ್ಗಂಟು ಮಾಡುತ್ತಿದ್ದಾರೆಂದು ಟೀಕಿಸಿದರು.
ಬುಡಕಟ್ಟು ಮಹಾಸಭಾದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ,ಕೈಯಲ್ಲಿ ತಂಬೂರಿ, ಮದ್ದಲೆ ಮತ್ತಿತರ ವಾದ್ಯಗಳನ್ನು ಹಿಡಿದು ಭಿಕ್ಷಾಟನೆ ಮಾಡುವ ಸಾಂಪ್ರದಾಯಿಕ  ಜೀವನ ನಡೆಸುವ ನಾವು ಬುಡ್ಗ ಜಂಗಮ ಸಮುದಾಯಕ್ಕೆ ಸೇರಿದವರಾಗಿದ್ದು ಕೆಲವು ರಾಜಕೀಯ ಕಾರಣಗಳಿಗಾಗಿ ನಮ್ಮ ಸಮುದಾಯಕ್ಕೆ ಜಾತಿ ಪ್ರಮಾಣ ನೀಡದೇ ವಂಚಿಸಲಾಗುತ್ತಿದೆ ಎಂದು ದೂರಿದರು.
ಜಾತಿ, ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ಸ್ಥಳ ಪರಿಶೀಲನಾ ವರದಿಯಂತೆ ಕ್ರಮ ಕೈಗೊಳ್ಳಬೇಕು, ಎಲ್ಲಾ ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಬುಡ್ಗ ಜಂಗಮ ಎಂದೇ ನಮೂದಿಸಬೇಕು ಎಂದು ಅವರು ಒತ್ತಾಯಿಸಿದರು. ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಭಟನೆಗೆ ಬೆಂಬಲ ನೀಡಿ, ಅನವಶ್ಯವಾಗಿ ಜಾತಿ ಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಹಕ್ಕುಗಳಿಗೆ ಹಿನ್ನಡೆ ಆಗುತ್ತಿದೆ, ರಾಜಕೀಯ ಕಾರಣಗಳಿಗಾಗಿ ಸಮುದಾಯಕ್ಕೆ ದ್ರೋಹ ಮಾಡುವುದನ್ನು ತಾವು ಸಹಿಸುವುದಿಲ್ಲ. ನನಗೆ ಶಾಸಕ ಸ್ಥಾನಕ್ಕಿಂತ ಬಡವರ ಹಿತ ಮುಖ್ಯವೆಂದು ನುಡಿದರು.
ಪ್ರತಿಭಟನೆಯಲ್ಲಿ ಬುಡ್ಗ ಜಂಗಮ ಸಂಘದ ರಾಜ್ಯಾಧ್ಯಕ್ಷ ಶೇಷಪ್ಪ, ಮುಖಂಡರಾದ ಕೊಂಡಪಲ್ಲಿ ಮುನಿಯಪ್ಪ, ಹಾರೋಹಳ್ಳಿ ನಾರಾಯಣಸ್ವಾಮಿ, ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಸ್. ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಗಂಗಾಧರ್, ಮಾಲೂರಿನ ನಾರಾಯಣಸ್ವಾಮಿ, ಮುಳಬಾಗಿಲು ತಾಲೂಕಿನ ಶ್ರೀನಿವಾಸ್, ಶ್ರೀನಿವಾಸಪುರ ತಾ.ಅಧ್ಯಕ್ಷ ಶಂಕರ್, ಬೇತಮಂಗಲದ ನಾರಾಯಣಪ್ಪ, ಅಲೆಮಾರಿ ಸಂಘಟನೆ ಅಧ್ಯಕ್ಷ ವೆಂಕಟರಾಮಪ್ಪ, ಗೌರವಾಧ್ಯಕ್ಷ ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement