ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬ್ಯಾಂಕ್ ಮುಷ್ಕರ: ಗ್ರಾಹಕರಿಗೆ ಕಿರಿಕಿರಿ

Vishwanath S
Updated On : 19 Dec 2013, 1:04 am

ಗುಡಿಬಂಡೆ: ವೇತನ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ನಡೆಸಿದ ಮುಷ್ಕರದಿಂದಾಗಿ ಪಟ್ಟಣದಲ್ಲಿ ಬುಧವಾರ ಮೈಸೂರು ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿತ್ತು. ಇದರಿಂದಾಗಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಬ್ಯಾಂಕ್‌ಗೆ ತೆರಳಿ ಎಂದಿನಂತೆ ತಮ್ಮ ಹಣಕಾಸು ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಸದಾ ಗ್ರಾಹಕರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಬ್ಯಾಂಕ್ ಶಾಖೆ ಬಳಿ ಜನ ಬಂದು ಬಾಗಿಲು ಮುಚ್ಚಿರುವುದನ್ನು ಕಂಡು ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ದೀಪೋತ್ಸವ
ಹೊಸಕೋಟೆ: ತಾಲೂಕಿನ ಉಪ್ಪಾರಹಳ್ಳಿಯಲ್ಲಿನ ಶ್ರೀ ಮದ್ದೂರಮ್ಮ ದೇವಿ, ಚೌಡೇಶ್ವರಿ ದೇವಿ ಜಾತ್ರೆ, ದೀಪೋತ್ಸವ ಕಾರ್ಯಕ್ರಮಗಳು ಡಿ.20 ರಿಂದ ಪ್ರಾರಂಭಗೊಂಡು ಡಿ.29 ಕ್ಕೆ ಮುಕ್ತಾಯಗೊಳ್ಳಲಿವೆ. ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ಹರಡಿರುವ ಕಾರಣದಿಂದಾಗಿ ರಾಸುಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಕಾರ್ಖಾನೆಯಲ್ಲಿ ಕಿರುಕುಳ; ಆತ್ಮಹತ್ಯೆಗೆ ಕಾರ್ಮಿಕ ಯತ್ನ
ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಯೂನಿಕಾಸ್ಟ್ ಕಂಪನಿಯ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರೈತ ಸಂಘ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ನಾರಾಯಣಗೌಡ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಯೂನಿಕಾಸ್ಟ್ ಕಂಪನಿಯಲ್ಲಿ ಉಪ ಗುತ್ತಿಗೆದಾರರಲ್ಲಿ ದುಡಿಯುತ್ತಿರುವ ಮಧುಸೂದನ್ ಎಂಬ ಕಾರ್ಮಿಕ ಕಾರ್ಖಾನೆಯ ಪ್ಲಾಂಟ್ ಮ್ಯಾನೇಜರ್ ಬಾಲಾಜಿ ಹಾಗೂ ಹೆಚ್.ಆರ್. ಚೇತನ್ ಅವರ ನಿರಂತರ ಕಿರುಕುಳದಿಂದ ಮನನೊಂದ ಕಾರ್ಮಿಕ  ವಿಷ ಸೇವಿಸಿ ಆತ್ಮಹತ್ಯಗೆ ಪ್ರಯತ್ನಿಸಿದ್ದು ಅಲ್ಲಿದ್ದ ಕೆಲಸಗಾರರು ತಕ್ಷಣ ಆಸ್ಪತ್ರೆಗೆ ಸೇರಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿಸಿದ್ದಾರೆ.
ಜಿಲ್ಲಾ ಘಟಕ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಆಗ್ರಹ
ಮಾಲೂರು: ರಾಜಕೀಯ ಮಾಡಿ ತಾಲೂಕು ಘಟಕ ಒಡೆಯಲು ಯತ್ನಿಸುತ್ತಿರುವ ಜಿಲ್ಲಾ ಘಟಕದ ಕಾರ್ಯದರ್ಶಿ ವೆಂಕಟಶಿವಪ್ಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಅವರನ್ನು ತಾಲೂಕು ಘಟಕದ ಅಧ್ಯಕ್ಷ ಎಂ.ಮುನಿನಾರಾಯಣ್ ಅಗ್ರಹಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಸಂಪತ್‌ಕುಮಾರ್ ಆಡಳಿತದಲ್ಲೂ ಜಿಲ್ಲಾ ಕಾರ್ಯದರ್ಶಿಯಾಗಿದ್ದ ವೆಂಕಟಶಿವಪ್ಪ ಸಂಘ ವಿರೋಧಿ ಚಟುವಟಿಕೆಯಿಂದ ವಜಾಗೊಂಡಿದ್ದರೂ ಈಗ ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ. ಇವರ ಕುಮ್ಮಕ್ಕುನಿಂದ ಮಾಲೂರು ತಾಲೂಕು ಘಟಕ ಕಾರ್ಯದರ್ಶಿ ನರಸಿಂಹರನ್ನು ಎತ್ತಿ ಕಟ್ಟಿ ಸಂಘದ ಕಾರ್ಯ ಚಟುವಟಿಕೆಯನ್ನು ಕುಂಠಿತಗೊಳ್ಳಿಸುತ್ತಿದ್ದಾರೆ.ಕಳೆದ ಹದಿನೈದು ವರ್ಷದಿಂದ ಸಂಘದಲ್ಲಿ ವಿವಿಧ ಹುದ್ದೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಪಡೆಯದಂತೆ ಕಾರ್ಯ ನಿರ್ವಹಿಸುತ್ತಿರುವ ನನ್ನ ಮೇಲೆ ಆರೋಪ ಹೊರಿಸುತ್ತಿರುವ ವೆಂಕಟಶಿವಪ್ಪ ಹಾಗೂ ನರಸಿಂಹ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧ್ಯಕ್ಷರನ್ನು ಆಗ್ರಹಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಅನುದಾನ ದುರ್ಬಳಕೆ: ಗ್ರಾಪಂ ಕಾರ್ಯದರ್ಶಿ ಮದ್ದರೆಡ್ಡಿ ಸಸ್ಪೆಂಡ್
ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮದ್ದರೆಡ್ಡಿ  ಎಂಬುವವರನ್ನು 2013-14 ನೇ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿನ ಅನುದಾನ ದುರ್ಬಳಕೆ ಮಾಡಿಕೊಂಡಿರುವುದರಿಂದ ಹಾಗೂ ನಿಯಮಗಳನ್ನು ಉಲ್ಲಂಘಿಸಿ ವೆಚ್ಚಗಳನ್ನು ಮಾಡಲಾಗಿರುವ ಆರೋಪದ ಹಿನ್ನೆಲೆಯಲ್ಲಿ ಸಿಇಒ ನೀಲಾ ಮಂಜುನಾಥ್ ಡಿ.16 ರಂದು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಎಸ್ಸಿ ಘಟಕಕ್ಕೆ ಆಯ್ಕೆ
ಗುಡಿಬಂಡೆ: ತಾಲೂಕು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾಗಿ ಪ್ರೆಸ್ ಸುಬ್ಬರಾಯಪ್ಪ ಆಯ್ಕೆಯಾಗಿದ್ದಾರೆ. ಪಕ್ಷದ ಜಿಲ್ಲಾ ಪ.ಜಾತಿ ಘಟಕದ ಅಧ್ಯಕ್ಷ ಹಾಗೂ ಹಾಲಿ ಜಿ.ಪಂ. ಸದಸ್ಯ ಎಂ.ವಿ. ಕೃಷ್ಣಪ್ಪ, ಪ್ರ. ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಜಿನಪ್ಪ ಮತ್ತು ಮಾಜಿ ಶಾಸಕ ಎಂ. ಶಿವಾನಂದ ಸಮ್ಮುಖದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಆಯ್ಕೆ ನಡೆಯಿತು.
ಸರ್ಕಾರದ ಕ್ರಮ ಖಂಡನೀಯ: ಎಸ್‌ಎಫ್‌ಐನಿಂದ ಪ್ರತಿಭಟನೆ
ಶಿಡ್ಲಘಟ್ಟ: ಸಿಇಟಿ ಶುಲ್ಕ ಏರಿಕೆ ವಿರೋಧಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುಕರ್ ಮುನೀಂದ್ರ ಮಾತನಾಡಿ ವಿದ್ಯಾರ್ಥಿಗಳ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡಕುಟುಂಬಗಳಿಂದ ಬಂದವರು. ಅವರ ನೆರವಿಗೆ ನಿಲ್ಲಬೇಕಾದ ಸರಕಾರವೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಕೆಲ ಖಾಸಗಿ ಕಾಲೇಜುಗಳ ಮುಖಂಡರೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿದ ಅವರು ಈ ಕೂಡಲೇ ಏರಿಕೆ ಮಾಡಿರುವ ಸಿಇಟಿ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ನಾರಾಯಣಸ್ವಾಮಿಗೆ ಮನವಿಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.
ಕಳವು ಯತ್ನ: ಮಾಲೀಕರ ಕೈಗೆ ಸಿಕ್ಕಿ ಬಿದ್ದ ಕಳ್ಳ
ಶಿಡ್ಲಘಟ್ಟ: ಪುರಪೋಲಿಸ್ ಠಾಣೆಯ ಹಿಂಭಾಗದಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣದ ಅಂಗಡಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ಅಂಗಡಿ ಮಾಲೀಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ಪಟ್ಟಣದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿರುವ ಮಹೇಶ್ ಎಂಬುವವರ ಕೀರ್ತಿ ಎಂಟರ್‌ಪ್ರೈಸಸ್ ಮತ್ತು ಸಿಮೆಂಟ್ ಅಂಗಡಿಯಲ್ಲಿ ಬೆಳಗಿನ ಜಾವ 4 ಘಂಟೆಯ ಸುಮಾರಿನಲ್ಲಿ ಚಿಂತಾಮಣಿ ಮೂಲದ ರೆಹಮಾನ್(40) ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಬೆಳಗಿನ ಜಾವ 5 ಘಂಟೆಯಲ್ಲಿ ಅಂಗಡಿ ಮಾಲೀಕ ಮಹೇಶ್ ವಾಯು ವಿಹಾರಕ್ಕೆ ಹೊರಟು ಅಂಗಡಿ ಮುಂದೆ ಬಂದಾಗ, ತನ್ನ ಅಂಗಡಿಯ ಮುಂದೆ ಆಟೋ ನಿಲ್ಲಿಸಿರುವುದನ್ನು ಗಮನಿಸಿ ಅನುಮಾನ ಬಂದು ತಕ್ಷಣ ಅಂಗಡಿಯ ಬಳಿಗೆ ಬಂದು ನೋಡಿದಾಗ ಸುಮಾರು 25 ಸಾವಿರ ರು. ಬೆಲೆಬಾಳುವ ಕಬ್ಬಿಣದ ಸರಳುಗಳನ್ನು ಬಟ್ಟೆಗಳಿಂದ ಸುತ್ತಿ, ಆಟೋದಲ್ಲಿ ಇಡಲು ಯತ್ನಿಸುತ್ತಿದ್ದ ಕಳ್ಳನನ್ನು ಗಮನಿಸಿದರು. ತಕ್ಷಣ ಪಕ್ಕದಲ್ಲೆ ಇರುವ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕಳ್ಳನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪುರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement