ವಾಲ್ಮೀಕಿ ಸಮುದಾಯ ಭವನಕ್ಕೆ ಜಮೀನು
ಕ.ಪ್ರ.ವಾರ್ತೆ , ಮಾಲೂರು , ಡಿ.18
ಹಲವು ದಶಕಗಳ ಕನಸಾಗಿದ್ದ ವಾಲ್ಮೀಕಿ ಭವನಕ್ಕೆ ಜಿಲ್ಲಾಧಿಕಾರಿಗಳು ಪಟ್ಟಣದಲ್ಲಿ 20 ಗುಂಟೆ ಜಮೀನನ್ನು ಮಂಜೂರು ಮಾಡಿರುವುದು ಅಭಿನಂದಾರ್ಹವಾಗಿದ್ದು, ವಾಲ್ಮೀಕಿ ಸಾಮುದಾಯ ಜಿಲ್ಲಾಧಿಕಾರಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಾಲ್ಮೀಕಿ ನಾಯಕ ಸಂಘದ ರಾಜ್ಯ ಕಾರ್ಯದರ್ಶಿ ವೆಂಕಟರಾಮ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ಇಪ್ಪತ್ತು ವರ್ಷದಿಂದ ಪಟ್ಟಣದಲ್ಲಿ ವಾಲ್ಮೀಕಿ ಭವನ ಬೇಕೆಂಬ ನಮ್ಮ ಆಶಯವು ಈಗ ಜಿಲ್ಲಾಧಿಕಾರಿಗಳು ಪಟ್ಟಣದ ಸರ್ವೆ ನಂ. 231ರಲ್ಲಿ 20 ಗುಂಟೆಯನ್ನು ನೀಡುವಂತೆ ಆದೇಶಿಸುವ ಮೂಲಕ ಈಡೇರಿದ್ದು, ಹಿಂದಿನ ಶಾಸಕ ಕೃಷ್ಣಯ್ಯ ಶೆಟ್ಟಿ ಹಾಗೂ ವಾಲ್ಮೀಕಿ ಸಂಘಗಳ ಪ್ರಾಮಾಣಿಕ ಪ್ರಯತ್ನವನ್ನು ಶ್ಲಾಘೀಸುತ್ತಿದ್ದೇನೆ ಎಂದರು.
ಹೋರಾಟ ತಡೆಯಲು ಸಾಧ್ಯವಿಲ್ಲ: ಸಾಮುದಾಯದ ಸಂಘಟನೆ ಶಕ್ತಿಯುತವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮಲ್ಲಿನ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಸುಳ್ಳು ಮಾಹಿತಿ- ಅಪಾದನೆಗಳನ್ನು ಮಾಡುವ ಮೂಲಕ ಸಂಘಟನೆಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಹದಿನೈದು ವರ್ಷದಿಂದ ಸಾಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ನನ್ನ ಮೇಲೆ ಮಿಥ್ಯ ಆರೋಪ ಮಾಡುವುದು ಸಲ್ಲ ಎಂದ ವೆಂಕಟರಾಮ್, ಸಂಘಟನೆಯ ಹೆಸರಿನಲ್ಲಿ ಯಾವುದೇ ಅಂತಹ ಅಕ್ರಮಗಳನ್ನು ಹಾಗೂ ಸ್ವಹಿತದ ಪ್ರಯತ್ನ ಮಾಡಿದ್ದಲ್ಲಿ ಸಾಕ್ಷಿ ಸಮೇತ ಆರೋಪ ಮಾಡಬೇಕೇ ಹೂರತು ಕೇವಲ ಬಾಯಿ ಮಾತಿನ ಹೇಳಿಕೆ ನೀಡುವ ಮೂಲಕ ನನ್ನ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದರು.
ವಾಲ್ಮೀಕಿ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಅಬ್ಬಯಪ್ಪ ಮಾತನಾಡಿ, ವೈಯಕ್ತಿಕ ಮನಸ್ತಾಪವನ್ನು ಸಂಘಟನೆಯನ್ನು ಒಡೆಯುವುದಕ್ಕೆ ಉಪಯೋಗಿಸುವ ಪ್ರವೃತ್ತಿಯನ್ನು ಮುಖಂಡರು ಬಿಟ್ಟಾಗ ಮಾತ್ರ ಸಮುದಾಯ ಅಬಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡದೇ ಸಂಘಟನೆಯನ್ನು ಬಲಪಡಿಸುವ ಕಡೆ ಎಲ್ಲರೂ ಗಮನ ಹರಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ಮಾತನಾಡಿ, ವೆಂಕಟರಾಮ್ ತಾಲೂಕಿನಲ್ಲಿ ಜನಾಂಗದ ಸಂಘಟನೆ ಇಲ್ಲದಿದ್ದಾಗ ಶಕ್ತಿಯುತವಾಗಿ ಕಟ್ಟಿ ಕಳೆದ ಹದಿನೈದು ವರ್ಷದಿಂದ ತಾಲೂಕು ಸಂಘಟನೆಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹವರ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆರೋಪ ಮಾಡಿ ಸಂಘಟನೆಯನ್ನು ಬೆಳವಣಿಗೆಯನ್ನು ಕುಂಠಿತ ಗೊಳಿಸುತ್ತಿರುವುದು ಸರಿಯಲ್ಲ. ತಾಲೂಕಿನಲ್ಲಿರುವ ಜನಾಂಗದವರು ಒಂದೇ ಸಂಘಟನೆಯಡಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ಬಿಜೆಪಿ ಮುಖಂಡರಾದ ವೆಂಕಟೇಶ್, ಚಲಪತಿ, ತಿಮ್ಮರಾಯಪ್ಪ ಮಾತನಾಡಿದರು. ಯಶವಂತಪುರ ಗೋಪಾಲ್, ಟಿ.ಕೆ. ನಾಗರಾಜ್, ವೆಂಕಟೇಶ್, ಮುನಿರಾಜು ಇದ್ದರು.