ಜನರನ್ನು ಬೆಚ್ಚಿಬೀಳಿಸುತ್ತಿರುವ ಚಳಿ
ಟೇಕಲ್: ಟೇಕಲ್ನಲ್ಲಿ ಕಳೆದ ಒಂದು ವಾರದಿಂದ ಕನಿಷ್ಠ ತಾಪಮಾನ ಕುಸಿಯುತ್ತಿದ್ದು ಮಧ್ಯಾಹ್ನ ಬಿಸಿಲಿದ್ದರೆ, ಸಂಜೆಯಾಯಿತೆಂದರೆ ಮೈಕೊರೆಯುವ ಚಳಿ ಎದುರಾಗುತ್ತದೆ.
ಇದರಿಂದ, ಟೇಕಲ್ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಹೇಮಾದ್ರಿ, ಪೋಮಾದ್ರಿ ಬೆಟ್ಟಗಳು ಈ ಕೊರೆಯುವ ಚಳಿ ಮತ್ತು ಹಿಮಕ್ಕೆ ಮೈ ಒಡ್ಡಿ ನಿಂತು ತಾಪಮಾನ ಮತ್ತಷ್ಟು ಕುಸಿಯುವಂತೆ ಮಾಡುತ್ತಿದೆ. ಅದರಲ್ಲೂ ರಾತ್ರಿಯಿಡೀ ಕೊರೆಯುವ ಚಳಿ ಕವಿಯುತ್ತದೆ.
ಮಧ್ಯರಾತ್ರಿ 1 ಗಂಟೆಯಿಂದಲೇ ದಟ್ಟವಾದ ಮಂಜು ಆವರಿಸಿದ್ದು ಮುಂಜಾನೆ 8ರ ತನಕ ರಸ್ತೆಗಳೆಲ್ಲಾ ಕತ್ತಲು ನಿರ್ಮಾಣವಾಗುತ್ತದೆ. ಬೆಟ್ಟದ ತಪ್ಪಲಿನಲ್ಲಿ ಓಡಾಡುವ ವಾಹನಗಳು ಗುರುತೇ ಸಿಗದಷ್ಟು ದಟ್ಟ ಮಂಜು ಆವರಿಸಿದ್ದು ಎಲ್ಲಾ ವಾಹನಗಳು ತಮ್ಮ ಮುಂದಿನ ಲೈಟ್ಗಳನ್ನು ಹಾಕಿಕೊಂಡೆ ಸಂಚರಿಸಬೇಕಾಗುತ್ತದೆ.
ಜನ ದಿಗ್ಭ್ರಾಂತ: ಅದರಲ್ಲೂ ಕೊರೆಯುವ ಚಳಿ, ಹಿಮ, ಹಿಮಗಾಳಿಯಿಂದ ವಯೋವೃದ್ಧರು, ಮಕ್ಕಳಿಗೆ ತೀವ್ರ ತೊಂದರೆ ಒಳಗಾಗಿದ್ದು ಅಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ರೋಗ ಉಲ್ಬಣವಾಗುತ್ತಿದೆ. ಉಸಿರಾಟದ ತೊಂದರೆ ಜನಸಾಮಾನ್ಯರ ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿದ್ದು, ಹಿಮದಲ್ಲಿ ಓಡಾಡುವ ಜನಕ್ಕೆ ಬಹುತೇಕ ಕಾಯಿಲೆಗಳು ಬರುತ್ತಿವೆ. ಈ ವಾರಾಂತ್ಯದಿಂದ ತಾಪಮಾನ ಕುಸಿಯುತ್ತಿದ್ದು ಜನ ದಿಗ್ಭ್ರಾಂತರಾಗಿದ್ದಾರೆ.
ಚಳಿ ಹೆಚ್ಚು: ಈ ಕೊರೆಯುವ ಚಳಿಗೆ ಜರ್ಕಿನ್, ಸ್ವೆಟರ್ ಹಾಗೂ ಚಳಿಯಿಂದ ದೂರವಾಗಲು ಬಳಸುವ ಉಡುಪುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನೂ ಕೆಲವರು ಚಳಿಯಿಂದ ಪಾರಾಗಲು ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು ಮಾರಾಟಗಾರರಿಗೂ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈ ಶೀತಗಾಳಿಯಿಂದ ಕೆಮ್ಮು, ಕಫ, ಮಕ್ಕಳ ಕಾಯಿಲೆ, ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಆಸ್ಪತ್ರೆಗಳಲ್ಲಿ ಜನ ಕಿಕ್ಕಿರಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಶೀತಗಾಳಿ ಮತ್ತು ಚಳಿ ಹೆಚ್ಚಾಗಿದ್ದು ಜನರನ್ನು ನಲುಗಿಸಿಬಿಟ್ಟಿದೆ.