ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ವೃತ್ತಿ ಶಿಕ್ಷಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ವಂಚಿಸುವ ಹುನ್ನಾರ'

Vishwanath S
Updated On : 21 Dec 2013, 1:17 am

ಕೆಜಿಎಫ್: ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದೊಂದಿಗೆ ರಾಜ್ಯ ಸರ್ಕಾರವು ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆಯನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟಿಸಿದರು.
 ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದು ಇಂಜಿನಿಯರಿಂಗ್‌ನ ಶೇ.45 ಮೆಡಿಕಲ್‌ನ ಶೇ.40 ದಂತ ವೈದ್ಯಕೀಯ ಶೇ.35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಿದ್ದು, ಯಾವುದೇ ಶಾಕಗಿ ಅನುದಾನರಹಿತ ಕಾಲೇಜಿನಲ್ಲಿ ಒಂದು ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗಲಿದೆ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು.
ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ 210 ಇಂಜಿನಿಯರಿಂಗ್ ಕಾಲೇಜುಗಳ 21 ಮತ್ತು 32 ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳಲ್ಲಿಯ ಸುಮಾರು 5 ಸಾವಿರ ಸೀಟುಗಳಿಗೆ ಮಾತ್ರ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ. ಉಳಿದ ಸುಮಾರು 75 ಸಾವಿರ ಸೀಟುಗಳಿಗೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿ ಕೊಟ್ಟಂತೆ ಆಗುತ್ತದೆ. ಏಕೆಂದರೆ ಕಾಮೆಡ್-ಕೆ ಈ ಹಿಂದೆ ನಡೆಸಿದ ಪ್ರವೇಶ ಅವ್ಯವಹಾರಗಳೇ ಇದಕ್ಕೆ ಸಾಕ್ಷಿಯಾಗಿದೆ. ನಾಮಾ ಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳು ಲಕ್ಷಾಂತರ ರೂಪಾಯಿಗೆ ಸೀಟು ಮಾರಾಟ ಮಾಡಿಕೊಳ್ಳುತ್ತಿದ್ದವು. ಆದರೆ ಸರ್ಕಾರ ತರಲಿರುವ ಈ ಕಾಯ್ದೆಯಿಂದಾಗಿ ಕಾನೂನು ಬದ್ದವಾಗಿಯೇ ಹಣ ಕೊಳ್ಳೆಹೊಡೆಯಲು ಅನುಕೂಲವಾಗುತ್ತದೆ ಇನ್ನು ಅಕ್ರಮಗಳಿಗೆ ಕಡಿವಾಣ ಹಾಕುವುದಂತೂ ಯಕ್ಷಪ್ರಶ್ನಯೇ ಸರಿ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಸಾಮಾಜಿಕ ನ್ಯಾಯವನ್ನು ಕಿತ್ತುಕೊಳ್ಳುವ ವಿದ್ಯಾರ್ಥಿ ವಿರೋಧಿ ಕಾಯ್ದೆಯನ್ನು ಎಬಿವಿಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ಆದ್ದರಿಂದ ಈ ಕೂಡಲೇ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಒತ್ತಾಯಿಸಿ ನಾಡಕಚೇರಿಯ ಉಪತಹಸೀಲ್ದಾರ್ ಇನಾಯತ್ತುಲ್ಲಾಖಾನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ನವೀನ್, ಕಾರ್ಯಕರ್ತರಾದ ಅಭಿಷೇಕ್, ಹನುಮಂತ್, ದಿಲೀಪ್, ಶಿವ, ಸುಬ್ರಮಣಿ, ಸುನಿಲ್, ಮನೋಜ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement