'ವೃತ್ತಿ ಶಿಕ್ಷಣದಿಂದ ಸ್ವಾವಲಂಬನೆ ಸಾಧ್ಯ'
ಕೋಲಾರ: ಸರ್ವಾಜನಿಕ ಶಿಕ್ಷಣ ಇಲಾಖೆಯಿಂದ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕೌಶಲ್ಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆಗೆ ಸಾಕ್ಷಿಯಾಗಿತ್ತು.ಕೆಲ ಶಾಲಾ ಮಕ್ಕಳು ತಯಾರಿಸಿ ತಂದಿದ್ದ ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಕೆಲ ಶಾಲಾ ಮಕ್ಕಳು ಸಿದ್ಧಪಡಿಸಿದ ವಸ್ತುಗಳನ್ನು ತಂದು ಅಚ್ಚರಿ ಮೂಡಿಸಿದರು.ಮಳೆ ಸಂಗ್ರಹಣೆ, ವೈಜ್ಞಾನಿಕ ಪದ್ಧತಿ ಅನುಸರಿಸಿ ತೋಟಗಾರಿಕೆ ಬೆಳೆಗಳನ್ನು ಹೇಗೆ ಬೆಳೆಯಬಹುದು ಎಂಬುದನ್ನು ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ಮಕ್ಕಳು ಪ್ರದರ್ಶಿಸಿದರು.ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಪದ್ಮನಾಭ್, ವೃತ್ತಿ ಶಿಕ್ಷಣ ಸ್ವಾವಲಂಬನೆಯ ಬದುಕಿಗೆ ದಾರಿ ತೋರುತ್ತದೆ ಎಂದರು.ವೃತ್ತಿ ಶಿಕ್ಷಣವಾದ ರೇಷ್ಮೆ ಕೃಷಿ, ತೋಟಗಾರಿಕೆ, ಟೈಲರಿಂಗ್,ಕಸೂತಿ, ಮರಗೆಲಸ ಸೇರಿದಂತೆ ಇನ್ನಿತರೆ ಕೌಶಲ್ಯಗಳ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಸ್ವಾವಲಂಬನೆಯ ಬದುಕು ಸಾಗಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪಠ್ಯದೊಂದಿಗೆ ವೃತ್ತಿ ಶಿಕ್ಷಣದ ಕಲಿಕೆಯೂ ಅಗತ್ಯವಾಗಿದ್ದು, ರಾಷ್ಟ್ರೀಯ ಕೃಷಿ ನೀತಿ ಅನ್ವಯ ಇದಕ್ಕೆ ಹೆಚ್ಚಿನ ಮಹತ್ವ ಬರುತ್ತಿದೆ ಎಂದು ತಿಳಿಸಿದರು. ಡಯಟ್ ಉಪಪ್ರಾಂಶುಪಾಲ ವೆಂಕಟರಾಮರೆಡ್ಡಿ, ಮಕ್ಕಳಿಗೆ ಸಾಮಾಜಿಕ ಉಪಯುಕ್ತತೆಗಳಾದ ಸೋಪು, ಶಾಂಪು, ಪೆನಾಯಿಲ್ ಹೀಗೆ ದಿನಬಳಕೆಯ ಅತ್ಯುಪಯುಕ್ತ ವಸ್ತುಗಳ ತಯಾರಿಕೆ ಕುರಿತು ತಿಳಿಸಿಕೊಟ್ಟರೆ ಅವರ ಮುಂದಿನ ಬದುಕಿಗೂ ದಾರಿಯಾಗುತ್ತದೆ ಎಂದು ತಿಳಿಸಿದರು. ಸರ್ವ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಸಿದ್ದಗಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಡಯಟ್ ನ ಉಪನ್ಯಾಸಕ ಮಾಗಡಯ್ಯ, ಜನಾರ್ದನ ನಾಯ್ಡು, ರಾಜಣ್ಣ, ಮಲ್ಲಿಕಾರ್ಜುನಯ್ಯ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಕುಂದ, ಆರ್.ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ ಇದ್ದರು.