ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅದ್ಧೂರಿ ಕಡಲೆಕಾಯಿ ಪರಿಷೆ

Vishwanath S
Updated On : 23 Dec 2013, 1:02 am

ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ಆದಿಚುಂಚನಗಿರಿ ಶಾಖಾ ಮಠದ ಬಳಿ ಇರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಮತ್ತು ಹನುಮಂತ ಜಯಂತ್ಯುತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮಖದಲ್ಲಿ ಭಾನುವಾರ ನಡೆಯಿತು.
ಪ್ರತಿ ವರ್ಷ ಶ್ರೀ ವೀರಾಂಜನೇಯಸ್ವಾಮಿ ಕಡಲೆಕಾಯಿ ಪರಿಷೆಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಜಿಲ್ಲೆ ಮಾತ್ರವಲ್ಲದೇ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ವೀರಾಂಜನೇಯಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರವನ್ನು ಕೈಗೊಳ್ಳಲಾಗಿತ್ತು. ಮಧ್ಯಾಹ್ನ ಉತ್ಸವ ಮೂರ್ತಿ ಹನುಮಂತನ ಮೆರವಣಿಗೆ ನಡೆಯಿತು. ಮಾರುತಿಯ ಜೈಕಾರದ ಘೋಷಣೆಗಳೊಂದಿಗೆ ಭಕ್ತಾದಿಗಳು ದೇವರ ಮೆರವಣಿಗೆಗೆ ಸಾಥ್ ನೀಡಿದರು. ಹೂವಿನ ಕರಗೋತ್ಸವ, ಕಳಶ ಹೊತ್ತ ಮಹಿಳೆಯರು, ಕಲಾವಿದರ ಕುಣಿತ ಆಕರ್ಷಕವಾಗಿತ್ತು.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಎಸೆದ ಕಡಲೆ ಕಾಯಿಗಳನ್ನು ಪಡೆದುಕೊಳ್ಳಲು ಭಕ್ತರು ನಾ ಮುಂದು ತಾ ಮುಂದು ಎನ್ನುವಂತೆ ಪೈಪೋಟಿಯಲ್ಲಿ ಮುಗಿ ಬಿದ್ದರು.
ಭಕ್ತರನ್ನುದ್ದೇಶಿಸಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸನ್ಮಾರ್ಗದಲ್ಲಿ ನಡೆಯುವ ಮನೋಭಾವನೆ ಬೆಳೆಯುತ್ತದೆ. ಪ್ರತಿಯೊಬ್ಬರು ಹುಟ್ಟಿದ ಮೇಲೆ ತಾವು ಮಾತ್ರವಲ್ಲದೇ ಸಮಾಜದ ಶ್ರೇಯಸ್ಸಿಗೂ ಶ್ರಮಿಸಬೇಕೆಂದು ಸಲಹೆ ನೀಡಿದರು.
ಮತ್ತೊಂದೆಡೆ ಆಲಯದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿದ್ದು ಭರ್ಜರಿ ವ್ಯಾಪಾರ ನಡೆಯಿತು. ಬೂಂದಿ, ಬುರುಗು (ಪುರಿ), ಸಿಹಿ ಪದಾರ್ಥಗಳನ್ನು ಜನರು ತೆಗೆದುಕೊಳ್ಳುತ್ತಿರುವುದರ ನಡುವೆ ಮಕ್ಕಳು ತಮ್ಮ ಪೋಷಕರಿಗೆ ಆಟದ ಸಾಮಾನುಗಳನ್ನು ಕೊಡಿಸುವಂತೆ ಒತ್ತಾಯಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement