ಛತ್ರಾಲಯ ನಿರ್ಮಾಣಕ್ಕೆ ಭೂಮಿ ಪೂಜೆ
ಬಾಗೇಪಲ್ಲಿ: ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶಗಳ ಬಡವರ ಮತ್ತು ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿಸುವುದೇ ಅಖಿಲ ಭಾರತ ಸೇವಾ ಅಭಿಯಾನ ಸಂಸ್ಥೆಯ ಪ್ರಮುಖ ಉದ್ದೇಶ ಎಂದು ಸ್ವಾಮಿನಿ ಸ್ವಾಥ್ಮ ನಿಷ್ಠಾನಂದ ಸರಸ್ವತಿ ಹೇಳಿದರು.
ತಾಲೂಕಿನ ಪೆನಮಲೆ ಗ್ರಾಮದಲ್ಲಿ ಸೌಮ್ಯ ಕೇಸಾನುಪಲ್ಲಿ ಛತ್ರಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪೂಜ್ಯ ಶ್ರೀ ದಯಾನಂದ ಸರಸ್ವ್ಪತಿಯವರು 2000ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿದರು. 13 ವರ್ಷಗಳಲ್ಲಿ ಇಡೀ ಭಾರತ ದೇಶದ 4 ದಿಕ್ಕುಗಳ 15 ರಾಜ್ಯಗಳಲ್ಲಿ ಸುಮಾರು 113 ಛತ್ರಾಲಯಗಳನ್ನು ಪೂರ್ಣ ಪ್ರಮಾಣದಲ್ಲಿ (ಉಚಿತ ವಿದ್ಯಾರ್ಥಿ ನಿಲಯಗಳನ್ನು) ಪ್ರಾರಂಭಿಸಲಾಗಿದ್ದು ಈ ಛತ್ರಾಲಯಗಗಳಲ್ಲಿ ಸುಮಾರು 14 ಸಾವಿರ ವಿದ್ಯಾರ್ಥಿಗಳು ಲಾಭ ಪಡೆದುಕೊಂಡಿದ್ದಾರೆ ಎಂದರು.
ಸರ್ಕಾರಿ ಮತ್ತು ಖಾಸಗಿ ಎನ್.ಜಿ.ಒಗಳು ನಡೆಸುವ ವಿದ್ಯಾರ್ಥಿ ನಿಲಯಗಳಂತೆಯೇ ಇದು ಒಂದು ವಿದ್ಯಾರ್ಥಿ ನಿಲಯ ಎಂದು ತಿಳಿಯುವುದು ಸಹಜ. ಆದರೆ, ಜ್ಞಾನಾರ್ಜನೆ ಮತ್ತು ಜಾಗ್ರತೆ ತೆಗೆದುಕೊಂಡು ಮಕ್ಕಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಛತ್ರಾಲಯದ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ಸಂಸ್ಥೆ ನಡೆಸುವಂತಹ ವಿದ್ಯಾರ್ಥಿ ನಿಲಯಗಳಿಗೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನಡೆಸುವಂತಹ ವಿದ್ಯಾರ್ಥಿ ನಿಲಯಗಳಿಗೂ ಅಜ-ಗಜಾಂತರ ವ್ಯತ್ಯಾಸವಿರುತ್ತದೆ ಎಂದರು.
ಕೇವಲ ಯಾಂತ್ರಿಕವಾಗಿ ವಿದ್ಯಾವಂತರನ್ನಾಗಿ ಮಾಡಿ ಕಳುಹಿಸುವುದಲ್ಲ, ಅವರಲ್ಲಿರುವಂತಹ ಕ್ರಿಯಾ ಶಕ್ತಿ ಚಿಕ್ಕ ವಯಸ್ಸಿನಿಂದಲೇ ಬೆಳೆಸಿದಾಗ ಮಾತ್ರ ಸತ್ಪ್ರಜೆಗಳಾಗಲು ಸಾಧ್ಯ ಎಂದರು. ದಾನಿ ರಮೇಶ್ ಕೇಸಾನುಪಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಬೇಕಾದರೆ ವಿದ್ಯಾಭ್ಯಾಸ ಮುಖ್ಯ, ಆದರೆ ನಮ್ಮ ದೇಶದಲ್ಲಿ ಬಡತನ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ತಂದೆ ಮತ್ತು ತಾಯಿ ಇಲ್ಲದಂತಹ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಖಿಲ ಭಾರತ ಸೇವಾ ಅಭಿಯಾನ ಸಂಸ್ಥೆಯ ಐಮ್ಮ್ ಫಾರ್ ಸೇವಾ ಯಡಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುವಂತಹ ಸೇವಾ ಮನೋಭವವಿರುವಂತಹ ಸಂಸ್ಥೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳ ದಾನಿಗಳಾದ ಪುಣ್ಯ ಕೋಟಿ ಇಂದಿರಮ್ಮ ಪೆನುಮಲೆ ವೆಂಕಟರಾಮಯ್ಯ ಟ್ರಸ್ಟ್ನ ವಾರಸದಾರರು, ನಿವೃತ್ತ ಬ್ಯಾಂಕ್ ಅಧಿಕಾರಿ ಪಿ.ವಿ. ಶ್ರೀನಾಥ್, ಗ್ರಾಮದ ನಂಜಿರೆಡ್ಡಿ ಇದ್ದರು.