ಡಿವೈಎಸ್ಪಿ ಕ್ರಮ ಖಂಡಿಸಿ ಪ್ರತಿಭಟನೆ
ಶಿಡ್ಲಘಟ್ಟ: ಮಧ್ಯವರ್ತಿಗಳ ಒತ್ತಾಯಕ್ಕೆ ಮಣಿದು ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿರುವ ಡಿವೈಎಸ್ಪಿ ಕ್ರಮ ಖಂಡಿಸಿ ಸವರ್ಣೀಯರು ಪಟ್ಟಣದ ಗ್ರಾಮಾಂತರ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಶೀಗೆಹಳ್ಳಿ ಗ್ರಾಮದ ಸವರ್ಣೀಯ ಮುನಿಶಾಮಪ್ಪನವರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ವೈ ಹುಣಸೇನಹಳ್ಳಿ ಗ್ರಾಪಂ ವ್ಯಾಪ್ತಿ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಸವರ್ಣೀಯರು ಗ್ರಾಮಾಂತರ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಅಟ್ರಾಸಿಟಿ ಪ್ರಕರಣ ದಾಕಲು ಮಾಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಬೇಕು. ನಿರಾಪರಾಧಿಗಳ ಮೇಲೆ ಪ್ರಕರಣ ದಾಖಲು ಮಾಡುವುದನ್ನು ತಾಲೂಕು ಒಕ್ಕಲಿಗರ ಯುವಸೇನೆ ಹಾಗೂ ಸವರ್ಣೀಯರು ಸಹಿಸುವುದಿಲ್ಲ. ಮುಂದೇ ಇದೇ ರೀತಿ ನಡೆದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸದರ್ಭದಲ್ಲಿ ಮಳ್ಳೂರು ಶಿವಣ್ಣ ಮಾತನಾಡಿ, ಕಾನೂನು ಕಾಪಾಡುವ ಅಧಿಕಾರಿಗಳ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ದಲ್ಲಾಳಿಗಳಿಗೆ ಮಣೆ ಹಾಕದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ. ನಮಗೆ ನ್ಯಾಯ ಕೊಡಿ. ಪ್ರಕರಣ ವಾಪಸ್ಸು ಪಡೆಯದಿದ್ದರೆ ನ್ಯಾಯ ಸಿಗುವವರೆಗೂ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು. ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ ಮಾತನಾಡಿ, ಸ್ಥಳಕ್ಕೆ ಹೋಗಿ ತನಿಖೆ ಮಾಡಿ ಶಿಕ್ಷೆ ನೀಡಿ ಅದರ ಬದಲು ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಡಿವೈಎಸ್‌ಪಿ ಸಣ್ಣತಿಮ್ಮಪ್ಪ ಮಾತನಾಡಿ, ಅಟ್ರಾಸಿಟಿ ಪ್ರಕರಣಗಳು ಬಂದರೆ ಕೂಲಂಕುಷ ತನಿಖೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಗ್ರೇಡ್.2 ತಾಸೀಲ್ದಾರರವರಿಗೆ ಮನವಿನೀಡಿದರು. ಪ್ರತಿಭಟನೆಯಲ್ಲಿ ಯಲವಹಳ್ಳಿ ರಮೇಶ್, ರಾಮಚಂದ್ರಪ್ಪ, ಅರ್. ಶ್ರೀನಿವಾಸ್, ತಾಲೂಕು ಒಕ್ಕಲಿಗ ಸಂಘದ ಯುವಸೇನೆ ಅಧ್ಯಕ್ಷ ವೆಂಕಟಸ್ವಾಮಿ, ಬಿ. ನಾರಾಯಣಸ್ವಾಮಿ, ಚೀಮನಹಳ್ಳಿ ಗೋಪಾಲ್, ಗುಡಿಹಳ್ಳಿ ಚಂದ್ರು, ಹಿತ್ತಲಹಳ್ಳಿ ಎಚ್.ಜಿ. ಗೋಪಾಲಗೌಡ ಮಾತನಾಡಿದರು.