ಫುಟ್‌ಪಾತ್ ತೆರವು ವಿರೋಧಿಸಿ ಪ್ರತಿಭಟನೆ
ಬಂಗಾರಪೇಟೆ: ಪಟ್ಟಣದಲ್ಲಿ ಫುಟ್‌ಪಾತ್ ಅಕ್ರಮ ಒತ್ತುವರಿ ಮಾಡಿ ಚಿಲ್ಲರೆ ಅಂಗಡಿಗಳನ್ನು ನಿರ್ಮಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳ ವರ್ತನೆ ವಿರುದ್ಧ ವ್ಯಾಪಾರಸ್ಥರು ರಸ್ತೆ ತಡೆ ಮಾಡಿದರು.
ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಬಜಾರ್ ರಸ್ತೆ ಹಾಗೂ ಬಸವೇಶ್ವರ ದೇವಾಲಯ ರಸ್ತೆಯಲ್ಲಿ ನೂರಾರು ಜನರು ಫುಟ್‌ಪಾತ್ ಮೇಲೆ ತರಕಾರಿ, ಹೂವು ಹಣ್ಣು ಮತ್ತಿತರೆ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ಸಂಚರಿಸಲು ಸ್ಥಳಾವಕಾಶ ಕೊರತೆಯಿಂದ ಪ್ರತಿದಿನ ಹರಸಾಹಸ ಮಾಡುವಂತಾಗಿತ್ತು. ಹಲವು ಬಾರಿ ನಾಗರಿಕರು ಫುಟ್‌ಪಾತ್ ಒತ್ತುವರಿ ತೆರವಿಗೆ ಪುರಸಭೆಗೆ ಮನವಿ ಮಾಡಿದ್ದರೂ ಉಪಯೋಗವಾಗಿರಲಿಲ್ಲ.
ಕಳೆದ ವಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ನಾಗರಿಕರ ಸಮಸ್ಯೆಗಳನ್ನು ಆಲಿಸುವ ವೇಳೆ ಫುಟ್‌ಪಾತ್ ಒತ್ತುವರಿ ಕುರಿತು ಗಮನಸೆಳೆದಿದ್ದರು. ಅದರಂತೆ ಪುರಸಭೆ ಅಧಿಕಾರಿಗಳು ಪೊಲೀಸರೊಂದಿಗೆ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಹಠಾತ್ ದಾಳಿ ಮಾಡಿ ಸಣ್ಣ ವ್ಯಾಪಾರಿಗಳನ್ನು ತೆರವುಗೊಳಿಸಿದರು.
ಇದರಿಂದ ಕೆರಳಿದ ವ್ಯಾಪಾರಿಗಳು ಸಾರ್ವಜನಿಕ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ ಪುರಸಭೆ ಅಧಿಕಾರಿಗಳ ವರ್ತನೆ ಖಂಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸೋಮವಾರ ಸಭೆ ಸೇರಿ ಚರ್ಚಿಸೋಣ ಅಲ್ಲಿಯವರೆಗೂ ಪ್ರತಿಭಟನೆ ವಾಪಸ್ ಪಡೆಯುವಂತೆ ಹೇಳಿ ಪ್ರತಿಭಟನೆಗೆ ತಾತ್ಕಾಲಿಕ ಅಂತ್ಯಹಾಡಿದರು.