ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಬದಿ ವ್ಯಾಪಾರಸ್ಥರಿಗೆ ಎಚ್ಚರಿಕೆ

Vishwanath S
Updated On : 23 Dec 2013, 1:04 am

ಚಿಂತಾಮಣಿ: ನಾಗರಿಕರಿಗೆ ಸುಗಮವಾಗಿ ಸಂಚರಿಸಲು ತೊಂದರೆ ಮಾಡುತ್ತಿರುವ ರಸ್ತೆ ಬದಿ ಗಾಡಿಗಳ ಮಾಲೀಕರಿಗೆ ನಗರಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದ ಆಜಾದ್ ಚೌಕ ಆಸುಪಾಸಿನಲ್ಲಿ ತಳ್ಳುವ ಗಾಡಿಗಳ ಕಿರಿ ಕಿರಿ ತಪ್ಪಿಸಲು ಸಾರ್ವಜನಿಕರ ದೂರಿನ ಮೇರೆಗ ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಹಾಗೂ ಸಬ್‌ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ತಳ್ಳುವ ಗಾಡಿ ಮಾಲೀಕರು ನಾಗರೀಕರಿಗೆ ತೊಂದರೆ ಮಾಡದಂತೆ ಗಾಡಿಗಳನ್ನು ಇಡಲು 2 ದಿನಗಳ ಗಡವು ನೀಡಿದ್ದಾರೆ.
2 ದಿನಗಳ ಒಳಗೆ ಹರಿಹರೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಅಥವಾ ಪಕ್ಕದ ರಸ್ತೆಯಲ್ಲಿಡಲು ಸೂಚಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸುಗಮ ಸಂಚಾರಕ್ಕೆ ಸಹಕರಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ಕನಕ ಜಯಂತಿ ಸ್ವರ್ಣೋತ್ಸವ ಕಾರ್ಯಕ್ರಮ
ಬಂಗಾರಪೇಟೆ: ಮನುಷ್ಯರು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರೊಂದಿಗೂ ಸಹಬಾಳ್ವೆ ಮಾಡಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗಲಿದೆ ಎಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಕುರುಬರ ಸಂಘದವತಿಯಿಂದ ನಡೆದ ಕನಕ ಜಯಂತಿ ಸ್ವರ್ಣೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕ ದಾಸರು ಸಮಾಜಕ್ಕೆ ಆದರ್ಶ ಪುರುಷ ಅವರು ಅಂದಿನ ಕಾಲದಲ್ಲೆ ಜಾತಿ ಪದ್ಧತಿ ಓಗಲಾಡಿಸಲು ಶ್ರಮಿಸಿದ ದೀಮಂತ ವ್ಯಕ್ತಿ ಇಂತಹ ವ್ಯಕ್ತಿಯನ್ನು  ಒಂದು ಸಮಾಜಕ್ಕೆ ಮೀಸಲಿಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಇದೇ ವೇದಿಕೆಯಲ್ಲಿ ವರ್ತೂರು ಪ್ರಕಾಶ್ ತಮ್ಮ 48ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅಕ್ಷರ ಜ್ಞಾನಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಲ್. ರಾಮಕೃಷ್ಣ,ಕೆ.ಚಂದ್ರಾರೆಡ್ಡಿ, ಪಲ್ಲವಿಮಣಿ, ಚಂದ್ರಶೇಖರಗೌಡ, ಸುಬ್ಬರಾಯಪ್ಪ, ಯುವರಾಜ್,ಅಶ್ವಥ್, ಚಲಪತಿ ಇದ್ದರು.
ಪ್ರಗತಿ ಪರಿಶೀಲನಾ ಸಭೆ
ಚಿಕ್ಕಬಳ್ಳಾಪುರ: ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ  ಡಾ.ಎಂ. ವೀರಪ್ಪ ಮೊಯಿಲಿ, ವಿವಿಧ ಯೋಜನೆಗಳು ಮತ್ತು ಕಾಮಗಾರಿಗಳಿಗಾಗಿ ಜಿಲ್ಲೆಯಲ್ಲಿ ಸುಮಾರು 300 ಕೋಟಿ ರು. ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
   ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ನಂತರ ಅಭಿವೃದ್ಧಿಗಾಗಿ ಅನುದಾನದ ಅಗತ್ಯತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದರು. ಐಟಿಸಿ ಸೇರಿದಂತೆ ಇತರೆ ಕಂಪನಿಗಳು ಶ್ರಮಿಸುತ್ತಿವೆ.ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ 5.99 ಕೋಟಿ, ನಗರದ ಬಿ.ಬಿ.ರಸ್ತೆಯಲ್ಲಿರುವ ಜಿಲ್ಲಾ ಗ್ರಂಥಾಲಯ ನೂತನ ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ, ಹುಡ್ಕೋ ಕಂಪನಿಯು ಹೆಚ್.ಎನ್.ಕಲಾ ಭವನಕ್ಕೆ 2 ಕೋಟಿ ನೀಡಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಮಾತನಾಡಿ, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ವಾಟರ್ ಹೀಟರ್ ಅಳವಡಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು. ಶಾಸಕ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಇದ್ದರು.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ತಾಲೂಕಿನಲ್ಲಿ ಕೃಷಿ ಮತ್ತು ಕಾರ್ಮಿಕ ಸಂಘಟನೆ ಬಲಪಡಿಸಲು ರೈತ ಕಾರ್ಮಿಕರ ಸಹಕಾರ ಮುಖ್ಯ ಎಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಜಿ.ವಿ. ರಘುನಾಥರೆಡ್ಡಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಜಿ.ವಿ. ರಘುನಾಥರೆಡ್ಡಿ ಅಧ್ಯಕ್ಷತೆಯಲ್ಲಿ ಕೃಷಿ ಮತ್ತು ಕಾರ್ಮಿಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಾರಾಯಣಸ್ವಾಮಿ ಅಧ್ಯಕ್ಷ, ರಾಜಣ್ಣ ಗೌರವಾಧ್ಯಕ್ಷ, ಉಪಾಧ್ಯಕ್ಷ ರಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ರೆಡ್ಡೆಪ್ಪ, ಕಾರ್ಯಾಧ್ಯಕ್ಷ ಎಂ.ಆರ್. ಮರಿಯಪ್ಪ, ಸಂಚಾಲಕರು ಕದಿರಪ್ಪ, ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಆನಂದರೆಡ್ಡಿ, ದ್ಯಾವಪ್ಪ, ಶ್ರೀನಿವಾಸರೆಡ್ಡಿ, ಅಂಬರೀಶ, ಮುನಿಯಮ್ಮ, ಅರುಣಮ್ಮ ಆಯ್ಕೆಯಾಗಿದ್ದಾರೆ. ರೈತರ ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ಕಾರ್ಮಿಕರು, ರೈತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ರಘುನಾಥರೆಡ್ಡಿ ಸೂಚಿಸಿದರು. ಜಿಲ್ಲಾ ಕಾರ್ಯದರ್ಶಿ ರೆಡ್ಡೆಪ್ಪ, ಕಾರ್ಯಾಧ್ಯಕ್ಷ ಶ್ರೀರಾಮರೆಡ್ಡಿ, ಸಂಘಟನಾ ಸಂಚಾಲಕ ಕಾಲೀದ್, ವೆಂಕಟರಾಮರೆಡ್ಡಿ ಇದ್ದರು.
ಇಂದು ಬರ ಪರಿಹಾರ ಅಧ್ಯಯನ ತಂಡ ಭೇಟಿ
ಚಿಕ್ಕಬಳ್ಳಾಪುರ: ಕೇಂದ್ರದ ಬರ ಪರಿಹಾರ ಅಧ್ಯಯನ ತಂಡ ಡಿ.23 ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಆರ್.ವಿಶಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಮಿಯೋಪತಿ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಯಲಹಂಕ ಹೋಮಿಯೋ ಕೇರ್ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ 100ನೇ ಉಚಿತ ಹೋಮಿಯೋಪತಿ ಶಿಬಿರವನ್ನು ಭಾನುವಾರ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿತ್ತು. ಲಯನೆಸ್ ಜಿಲ್ಲಾಧ್ಯಕ್ಷ ಡಾ.ಕೆ.ವೈ. ರಾಮಚಂದ್ರ ಉದ್ಘಾಟನೆ ನೆರವೇರಿಸಿದರು.  ಡಾ. ಜೆ.ವಿಶ್ವನಾಥ್ ಮಾತನಾಡಿ, ಈ ಶಿಬಿರದಲ್ಲಿ ಎಂತಹ ಹಳೆಯ ಖಾಯಿಲೆಗಳಾಗಲಿ ಮಕ್ಕಳಿಗೆ ಶೀತ ಜ್ವರ ಅಲ್ಲದೆ ಚರ್ಮ ರೋಗಗಳಿಗೂ ಔಷಧ ಲಭ್ಯವಿದ್ದು ರೋಗ ವಾಸಿಯಾಗುವುದಲ್ಲದೆ ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು. ಲಯನೆಸ್ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ವಿ.ವೆಂಕಟೇಶ್ ಮಾತನಾಡಿದರು. ವೈ.ಸಿ.ಕೃಪಾಕರ್ ಎಸ್.ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಗೀತಂ ವಿವಿ ಕಟ್ಟಡ ಉದ್ಘಾಟನೆ
ದೊಡ್ಡಬಳ್ಳಾಪುರ: ಗೀತಂ ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರ್ಥಿ ನಿಲಯ ಕಟ್ಟಡಗಳ ಉದ್ಘಾಟನಾ ಸಮಾರಂಭ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ. ಜಿ.ಸುಬ್ರಹ್ಮಣ್ಯಂ ತಿಳಿಸಿದರು.  ವಿವಿ ಆವರಣದಲ್ಲಿ ಅವರು ಭಾನುವಾರ ವಿಶ್ವವಿದ್ಯಾಲಯದ ಪರಿಚಯ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು. ವಿನಯ್ ಸದನ್ ಕಟ್ಟಡವನ್ನು ಕೇಂದ್ರ ಜವಳಿ ಸಚಿವ ಡಾ.ಕೆ.ಸಾಂಬಶಿವರಾವ್ ಉದ್ಘಾಟಿಸಲಿದ್ದಾರೆ.  ಕೋಕಿಲ ಸದನ ಕಟ್ಟಡವನ್ನು ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದಾರೆ. ಜಿಪಂ ಸದಸ್ಯ ಎನ್.ಹನುಮಂತೇಗೌಡ, ಕೇಂದ್ರದ ಮಾಜಿ ಸಚಿವ ಡಾ.ಬಿ.ಬಿ.ರಾಮಯ್ಯ, ಗೀತಂ ವಿವಿ ಅಧ್ಯಕ್ಷ ಡಾ.ಎಂ.ವಿ.ವಿ.ಎಸ್.ಮೂರ್ತಿ ಭಾಗವಹಿಸಲಿದ್ದಾರೆ ಎಂದರು. ದೊಡ್ಡಬಳ್ಳಾಪುರ ಬಳಿ ಸ್ಥಾಪಿತವಾಗಿರುವ ಗೀತಂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸುಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು,ಅಂತಾರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟ ನಿರೀಕ್ಷಿಸಲಾಗಿದೆ.
ಬೀದಿ ನಾಟಕ
ರಾಮನಗರ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಸೊಸೈಟಿಯಿಂದ ಆರ್ಥಿಕ ಸಾಕ್ಷರ ಆಂದೋಲನದ ಅಂಗವಾಗಿ ಆರ್ಥಿಕ ಸಾಕ್ಷರತೆ-ಆರ್ಥಿಕ ಸೇರ್ಪಡೆ ಕುರಿತು ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ, ಸಂವಾದ ಹಾಗೂ ಗೋಡೆ ಬರಹ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಆಯೋಜಿಸಲಾಗಿದೆ.ಡಿ.23ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ಡಣಾಯ್ಕನಪುರ, ಸಂಜೆ 5ಕ್ಕೆ ದೊಡ್ಡಗಂಗವಾಡಿ, ಡಿ.24ರ ಸಂಜೆ 4ಕ್ಕೆ ಚಿಕ್ಕೇನಹಳ್ಳಿ, ಸಂಜೆ 6ಕ್ಕೆ ಕಾಡನಕುಪ್ಪೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದು ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ವಸಂತ್‌ಕುಮಾರ್ ತಿಳಿಸಿದ್ದಾರೆ.ಡಿ.25ರ 9ಕ್ಕೆ ಮಾಗಡಿ ತಾಲೂಕಿನ ಕೋಟಗಾನಹಳ್ಳಿ, ಸಂಜೆ 5ಕ್ಕೆ ಗುಡ್ಡಹಳ್ಳಿ, ಡಿ.26ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ರಾಂಪುರ, ಸಂಜೆ 5ಕ್ಕೆ ಸುಗ್ಗನಹಳ್ಳಿ, ಡಿ.31ರ ಬೆಳಗ್ಗೆ 9ಕ್ಕೆ ರಾಮನಗರದ ಕಾರ್ಪೊರೇಷನ್ ಬ್ಯಾಂಕ್ ಎದುರು ಕಾರ್ಯಕ್ರಮ ನಡೆಯಲಿವೆ. ಡಿ.28ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ತಿಮ್ಮಸಂದ್ರಗೇಟ್, ಸಂಜೆ 5ಕ್ಕೆ ಮಾಗಡಿ ತಾಲೂಕಿನ ವಿ.ಜಿ.ದೊಡ್ಡಿ, ಡಿ.29ರ ಬೆಳಗ್ಗೆ 9ಕ್ಕೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿ, ಸಂಜೆ 5ಕ್ಕೆ ನಾಗವಾರ, ಡಿ.30ರ ಬೆಳಗ್ಗೆ 9ಕ್ಕೆ ಚನ್ನಪಟ್ಟಣದ ಬೇವೂರು, ಸಂಜೆ 5ಕ್ಕೆ ಮಳೂರು, ಡಿ.31ರ ಸಂಜೆ 5ಕ್ಕೆ ಮುದಗೆರೆ ಗ್ರಾಮದಲ್ಲಿ ಕಾರ್ಯಕ್ರಮ ಜರುಗಲಿವೆ.
ರೈತ ದಿನಾಚರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಿ.23 ರಂದು ರೈತರ ದಿನಾಚರಣೆ ಆಯೋಜಿಸಿದ್ದು ಶಾಸಕರು ಹಾಗೂ ತಾಲೂಕಿನ ನಾಲ್ಕು ಹೋಬಳಿಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ರೈತರು ತಪ್ಪದೆ ಭಾಗವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಿಕೋತ್ಸವ
ಮಾಲೂರು: ಮಕ್ಕಳ ಕಲಿಕೆಯನ್ನು ಖಾತರಿ ಪಡಿಸುಕೊಳ್ಳುವುದಕ್ಕೆ ಕಲಿಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಚಿಕ್ಕ ಕುಂತೂರು ಸಂಕೀರ್ಣದ ಸಿಆರ್‌ಪಿ ಎನ್.ವಿ. ಶ್ರೀನಿವಾಸ್ ಹೇಳಿದರು. ತಾಲೂಕಿನ ಚಿಕ್ಕಕುಂತೂರು ಸಂಕೀರ್ಣದ ನಿದರ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಹಂತದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಹೆಚ್.ಎಂ.ರಾಮಚಂದ್ರಯ್ಯ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳಿಗಿಂತ ಕಲಿಕೆಯಲ್ಲಿ ಮುಂದಾಗಬೇಕೆಂಬ ಉದ್ದೇಶದಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಕಲಿಕೋತ್ಸವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ತಿಮ್ಮಯ್ಯ ವಹಿಸಿದರು. ಚಿಕ್ಕಕುಂತೂರು ಚಿಕ್ಕ ಕುಂತೂರು, ಮಂಜುಳಾ, ಭುವನಹಳ್ಳಿ ಪ್ರಮೀಳಾ, ವೇದಾವತಿ, ಮಂಜುಳ, ನಾರಾಯಣಮ್ಮ ಇದ್ದರು.
ಏಕಾಗ್ರತೆ ಅಗತ್ಯ
ಮಾಲೂರು: ಮಕ್ಕಳಲ್ಲಿ ಏಕಾಗ್ರತೆ ಬೆಳೆದ ಹಾಗೆ ಪರೀಕ್ಷೆ ಭಯ ದೂರವಾಗುತ್ತದೆ ಎಂದು ಮಣಿಪಾಲ್ ವಿಶ್ವವಿದ್ಯಾಲಯದ ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರ ಡಾ. ಬಾಲಾಜಿ ಹೇಳಿದರು. ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಇಂದಿನ ಮಕ್ಕಳ ಎಕಾಗ್ರತೆಯಲ್ಲಿ ಭಂಗ ತರಲೆಂದೇ ಟಿ.ವಿ. ಮೊಬೈಲ್ ಸೇರಿದಂತೆ ಹಲವು ಎಲ್ಟೆಕ್ಟ್ರಾನಿಕ್ ಸಾಧನಗಳು ಹುಟ್ಟಿಕೊಂಡಿವೆ ಎಂದರು. ಡಾ. ಮೃತ್ಯಂಜಯಪ್ಪ ಪಿ. ಕೂಲೆನೂರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಮಕ್ಕಳಿಂದ ವಾರ್ಷಿಕ ವರದಿ ಓದಲಾಯಿತು. ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂಧರ್ಭದಲ್ಲಿ ಪುರಸ್ಕಾರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಂಶುಪಾಲೆ ಮುನಿರಾ, ಹುಸ್ಮಾ, ಕಣ್ಣನ್ ಬಾಬು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement