ಅನ್ನಕ್ಕೆ ಮಾರ್ಗ ತೋರಿಸಿದ ವಿಶ್ವ ಮಾನವ
ಕ.ಪ್ರ.ವಾರ್ತೆ , ಕೋಲಾರ , ಡಿ.23
ಕುವೆಂಪು ಅವರಿಂದ ಪ್ರಭಾವಿತರಾಗಿದ್ದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರೂ ವಿಶ್ವಮಾನವರಾಗಿದ್ದರು. ಹಿಂದುಳಿದ ಮತ್ತು ಶೋಷಿತ ಸಮುದಾಯದ ಬಗ್ಗೆ ಅವರಲ್ಲಿ ಕಾಳಜಿ ಇತ್ತು. ನಾನು ಬೆಸ್ತರ ಜನಾಂಗಕ್ಕೆ ಸೇರಿದವನಾದರೂ ಜಾತಿಯಿಂದ ನನ್ನ ನೋಡದೆ ಅನ್ನಕ್ಕೆ ದಾರಿ ತೋರಿಸಿಕೊಟ್ಟ ಮಹಾನ್ ಚೇತನರವರು.
ಹೀಗೆಂದು ತಮ್ಮ ಬದುಕಿಗೆ ದಾರಿ ತೋರಿದ ಪ್ರೀತಿಯ ಗುರುಗಳ ಬಗ್ಗೆ ಅಭಿಮಾನ ವ್ಯಕ್ತಪಡಿಸಿದವರು ಸಾಹಿತಿ, ವಿಮರ್ಷಕ ಡಾ. ಚಂದ್ರಶೇಖರ ನಂಗಲಿ. ಬೆಂಗಳೂರು ವಿವಿಯ ವಿದ್ಯಾರ್ಥಿಯಾಗಿದ್ದ ನನಗೆ ಜಿಎಸ್ಎಸ್ ಗುರುಗಳಾಗಿದ್ದರು. 1980ರಲ್ಲಿ ನಾನು ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದ ಸಂದರ್ಭದಲ್ಲಿ ಗುರುಗಳು ಕೆಪಿಎಸ್ಸಿಯಲ್ಲಿ ವಿಷಯ ತಜ್ಞರಾಗಿದ್ದರು. ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದಿದ್ದರೂ ಮೌಲ್ಯಮಾಪಕರು ನನಗೆ ಕೇವಲ 29 ಅಂಕ ನೀಡಿ ಸರ್ಕಾರಿ ಉದ್ಯೋಗ ಸಿಗದಂತೆ ಮಾಡಿದ್ದರು. ಆ ಸಂದರ್ಭದಲ್ಲಿ ನನಗಾಗಿದ್ದ ಅನ್ಯಾಯದ ಬಗ್ಗೆ ಜಿಎಸ್ಎಸ್ ಬಳಿ ಹೇಳಿಕೊಂಡಾಗ ದಿಗ್ಬ್ರಮೆ ವ್ಯಕ್ತಪಡಿಸಿದ್ದರು. ಭಾಷಾ ಶಾಸ್ತ್ರದಲ್ಲಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕ ಪಡೆದಿರುವ ನಿನಗೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದರೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿನಗೆ ನಾನು ಬಿ ಪ್ಲಸ್ ಅಂಕಗಳನ್ನು ನೀಡಿದ್ದೇನೆ. ಗ್ರೇಡಿಂಗ್ ನೀಡುವಾಗ ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರು ವಿಷಯ ತಜ್ಞರನ್ನು ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ನಿನಗೆ ಅನ್ಯಾಯವಾಗಿರಬಹುದೆಂದು ಹೇಳುವ ಮೂಲಕ ಕೆಪಿಎಸ್ಸಿಯಲ್ಲಿನ ಕೊಳಕಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು ಎಂದು ನೆನಪಿಸಿಕೊಂಡರು.
ಕೆಪಿಎಸ್ಸಿಯಲ್ಲಿ ಅಂತರ ವ್ಯೂ ಎಂಬ ಕಪಟ ನಾಟಕ ನಡೆಯುತ್ತಿರುವುದರಿಂದ ಪ್ರತಿಭಾವಂತ ಅದರಲ್ಲೂ ವಿಶೇಷವಾಗಿ ಅಹಿಂದ ವರ್ಗಕ್ಕೆ ಸೇರಿದ ಪ್ರತಿಭೆಗಳಿಗೆ ವಂಚನೆ ಆಗುತ್ತಿದೆ ಎಂದು ತಮ್ಮ ಮನದಾಳದ ಅಭಿಪ್ರಾಯಗಳನ್ನು ಹೊಸದಾಗಿ ಆರಂಭವಾಗಿದ್ದ ಲಂಕೇಶ್ ಪತ್ರಿಕೆಗೆ ಬರೆದಿದ್ದರು. ಅದು ಪತ್ರಿಕೆಯಲ್ಲಿ ಪ್ರಕಟವಾದ ಮೇಲೆ ನಾನು ನನ್ನ ಪರ ವಕೀಲರಾಗಿದ್ದ ಸಿ.ಎಸ್. ಮುರಳಿಧರ ಅವರ ಮೂಲಕ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇನು. ಜಿಎಸ್ಎಸ್ ಅವರ ಲೇಖನವನ್ನು ಕೋರ್ಟಿಗೆ ಪುರಾವೆಯಾಗಿ ನೀಡಿದ ಫಲದಿಂದಾಗಿ ನ್ಯಾಯಾಧೀಶರು ಕೆಪಿಎಸ್ಸಿಯ ಕರ್ಮಕಾಂಡದ ಬಗ್ಗೆ ತರಾಟೆಗೆ ತೆಗೆದುಕೊಂಡು 150 ಜನರ ಫಲಿತಾಂಶವನ್ನು ತಡೆ ಹಿಡಿದು ಲೋಪ ಸರಿಪಡಿಸುವಂತೆ ಸೂಚನೆ ನೀಡಿದ್ದರು.
ಇದರಿಂದಾಗಿ ನನಗೆ ನಂತರ ಬೆಂಗಳೂರು ವಿವಿಯಲ್ಲಿ ಕೆಲಸ ಸಿಗುವಂತಾಯಿತು. ನನ್ನ ಗುರುಗಳಾದ ಜಿಎಸ್ಎಸ್ ಅವರು ಕೆಪಿಎಸ್ಸಿಯ ಬಗ್ಗೆ ಲಂಕೇಶ್ ಪತ್ರಿಕೆಯಲ್ಲಿ ಲೇಖನ ಬರೆಯದಿದ್ದಲ್ಲಿ ಬದುಕಿಗೆ ದಾರಿ ಕಂಡುಕೊಳ್ಳುವುದು ಕಷ್ಟವಾಗುತ್ತಿತ್ತು. ಜಿಎಸ್ಎಸ್ ನಂತರ ಹಾ.ಮಾ.ನಾಯಕ್ ಹಾಗೂ ಎಸ್.ಎಸ್. ಶೆಟ್ಟರ್ ಸಹ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದರಿಂದ ಕೆಪಿಎಸ್ಸಿಯಲ್ಲಿ ನನ್ನಂಥ ಅನೇಕ ಹಿಂದುದ ವರ್ಗಕ್ಕೆ ಸೇರಿದವರಿಗೆ ನ್ಯಾಯ ಸಿಕ್ಕಿತು. ಜಿಎಸ್ಎಸ್ ಅವರಲ್ಲಿ ಕುವೆಂಪು ಸಾರಿದ ವಿಶ್ವ ಮಾನವ ಸಂದೇಶ ಇದ್ದರಿಂದ ನನಗೆ ಅನ್ನಕ್ಕೆ ದಾರಿಯಾಯಿತು. ಇಂಥ ಮಹಾನ್ ಚೇತನರನ್ನು ನನ್ನ ಪ್ರೀತಿಯ ಗುರುಗಳು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ಕಳೆದ ಎರಡು ತಿಂಗಳ ಹಿಂದೆ ಜಿಎಸ್ಎಸ್ ಅವರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದೆ. ಕಾಲಿಗೆ ನಮಸ್ಕಾರ ಮಾಡಿದ್ದೆ. ಗುರುಗಳ ನಿಧನದ ವಾರ್ತೆ ಕೇಳಿ ಮನಸ್ಸಿಗೆ ನೋವಾಗಿದೆ ಎಂದು ಡಾ.ನಂಗಲಿ ಚಂದ್ರಶೇಖರ್ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಜಿಎಸ್ಎಸ್ ಅವರಿಗೆ ಶ್ರದ್ಧಾಂಜಲಿ
ಮಾಲೂರು: ಅಗಲಿದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಗೌರವಾರ್ಥ ಸ್ಥಳೀಯ ಪತ್ರಕರ್ತರ ಸಂಘ ಸೋಮವಾರ ಸಂಜೆ ಶ್ರದ್ಧಾಂಜಲಿ ಸಭೆ ಆಯೋಜಿಸಿತ್ತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಅಶ್ವಥ್ ರೆಡ್ಡಿ ಮಾತನಾಡಿ, ನವೀನ ಸಾಹಿತ್ಯದ ಪರಂಪರೆಯಲ್ಲಿ ಮೊದಲಿಗರಾಗಿದ್ದ ಜಿಎಸ್ಎಸ್ ಅವರು ಸಾರ್ಥಕ ಜೀವನ ನಡೆಸಿದವರು. ಅವರ ಅಗಲಿಕೆಯಿಂದ ಸಾಹಿತ್ಯ ಲೋಕ ಬರಿದಾಗಿರುವ ಭಾವನೆ ಮೂಡುತ್ತಿದೆ ಎಂದರು. ಕವಿ ಜ.ಮು. ಚಂದ್ರ ಮಾತನಾಡಿ, ಜಿಎಸ್ಎಸ್ ಅವರ ಕಾವ್ಯ-ಸಾಹಿತ್ಯಗಳು ಯುವ ಕವಿಗಳಿಗೆ ಎಂದಿಗೂ ಪ್ರೇರಕ ಶಕ್ತಿಯಾಗಿರುತ್ತದೆ ಎಂದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಪ್ಪ, ಡಾ.ನಾ. ಮುನಿರಾಜು, ಮಾಸ್ತಿ ಕೃಷ್ಣಪ್ಪ, ಉಪಾನ್ಯಾಸಕ ಕಾಳಪ್ಪ, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಪತ್ರಕರ್ತ ಸಂಘದ ಅಧ್ಯಕ್ಷ ರವೀಂದ್ರ ಮಾತನಾಡಿದರು.
ಜನಪದ ಗಾಯಕ ಗುಲ್ಚಾರ್ ಡಾ.ಜಿ.ಎಸ್ಎಸ್ ರವರ ಎದೆ ತುಂಬಿ ಹಾಡುವೆನು ಹಾಡುನ್ನು ಹಾಡುವ ಮೂಲಕ ನಮನ ಸಲ್ಲಿಸಿದರು. ಚಂಬೆ ರಾಜೇಶ್, ಕಲಾವಿದ ಸ್ವಾಮಿ, ಭರತ್ಭೂಷಣ್ ಇದ್ದರು.
ಕಸಾಪ, ಕವಿಗಳ ಸಂತಾಪ: ಡಾ.ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಸ್ಥಳೀಯ ಕಸಾಪ ಸಂತಾಪ ಸೂಚಿಸಿದೆ. ಅಧ್ಯಕ್ಷ ಮಧುಸೂಧನ್, ಶ್ರೀಯುತರ ಸಾವಿನಿಂದ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದಿದ್ದಾರೆ. ಸಾಹಿತಿ ಚಂದ್ರಶೇಖರ್ ನಂಗಲಿ, ಸಾಹಿತಿಗಳಾದ ಮಾ.ವೆಂ. ತಮ್ಮಯ್ಯ, ವೇಣುಗೋಪಾಲ್ವಹ್ನಿ ಸಂತಾಪ ಸೂಚಿಸಿದ್ದಾರೆ.
ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಕಸಾಪ ಸಂತಾಪ
ಶಿಡ್ಲಘಟ್ಟ: ಕನ್ನಡ ಸಾಹಿತ್ಯ ಮಾಂತ್ರಿಕ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಶಿಡ್ಲಘಟ್ಟ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಂತಾಪ ಸೂಚನ ನಿರ್ಣಯವನ್ನು ಅಂಗೀಕರಿಸಲಾಯಿತು. ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ನಾಗರಾಜ ರಾವ್, ತಾಲೂಕು ನಿಕಟ ಪೂರ್ವ ಅಧ್ಯಕ್ಷ ರೂಪಸಿ ರಮೇಶ್ ಮುಂತಾದವರು ಶಿವರುದ್ರಪ್ಪರವರ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ್ಇದ್ದರು. 2 ನಿಮಿಷಗಳ ಮೌನ ಆಚರಿಸಲಾಯಿತು.
ಜಿಎಸ್ಎಸ್ ಅವರಿಗೆ ಶ್ರದ್ಧಾಂಜಲಿ
ಟೇಕಲ್: ರಾಷ್ಟ್ರಕವಿ, ಕನ್ನಡದ ಸಾರಸ್ವತ ಲೋಕದ ನವೋದಯ ಸಾಹಿತ್ಯದ ಕವಿ ಜಿ.ಎಸ್. ಶಿವರುದ್ರಪ್ಪನವರು ವಿಧಿವಶರಾದ ಹಿನ್ನಲೆಯಲ್ಲಿ ಟೇಕಲ್ ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ತಾಪಂ ಸದಸ್ಯೆ ನಿರ್ಮಲಾಆಂಜಿನಪ್ಪ, ಟಿ.ಎಸ್. ಅಶೋಕ್ ಕುಮಾರ್, ಚನ್ನರಾಯಪ್ಪ, ಆರ್.ಶ್ರೀರಾಮುಲು, ಪತ್ರಕರ್ತ ಟೇಕಲ್ ಲಕ್ಷ್ಮೀಶ್, ಕಾರಂಗುಟ್ಟೆ ರವಿಶಂಕರ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಜಿಎಸ್ಎಸ್ ಅಗಲಿಕೆಗೆ ಸಂತಾಪ
ಚಿಂತಾಮಣಿ: ಸಾಹಿತ್ಯ ಲೋಕದ ದಿಗ್ಗಜರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಜಿ.ಎಸ್. ಶಿವರುದ್ರಪ್ಪರವರ ಮರಣದಿಂದ ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡ ನಾಡಿನ ಜನತೆಗೆ ಅತೀವ ನೋವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ಹಾಗೂ ತಾಲೂಕು ಅಧ್ಯಕ್ಷ ಅಂಬರೀಷ್ ಸಂತಾಪ ಸೂಚಿಸಿದೆ.
ಗಣ್ಯರ ನುಡಿ ನಮನ
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಸಾಹಿತ್ಯ ಲೋಕದ ಮಹಾನ್ ಪುರುಷರು. ಯುವ ಕವಿಗಳಿಗೆ ದಾರಿ ದೀಪ ಮಾರ್ಗದರ್ಶಕರು. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಕೊಂಡಿ ಕಳಚಿ ಬಿದ್ದಂತಾಗಿದೆ. ಪ್ರಮುಖವಾಗಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು.
- ಗೋಪಾಲಗೌಡ ಕಲ್ಪಮಂಜಲಿ,
ಸಾಹಿತಿ, ಚಿಕ್ಕಬಳ್ಳಾಪುರ
ಸಾಹಿತ್ಯ ಕ್ಷೇತ್ರಕ್ಕೆ ಜಿ.ಎಸ್. ಶಿವರುದ್ರಪ್ಪ ಅವರು ನೀಡಿದ ಕೊಡುಗೆ ಅಪಾರವಾದುದು. ಮಹಾನ್ ಚೇತನ ಕುವೆಂಪುರವರ ಸಾಲಿಗೆ ಸೇರುವ ಸ್ವಾತಿಕ ಪ್ರತಿಭೆ. ಇಂತಹ ವ್ಯಕ್ತಿಗಳು ಸಮಾಜಕ್ಕೆ ಮತ್ತೆ ಸಿಗುವುದು ತುಂಬಾ ಕಷ್ಟ.
- ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ, ಸಾಹಿತಿ, ಚಿಂತಾಮಣಿ
ಜ್ಞಾನಪೀಠ ಸಿಗಬೇಕಿತ್ತು
ನಾಡಿನ ಸಾರಸ್ವತ ಲೋಕದ ಹಿರಿಯ ಚೇತನ ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು. ವಿಶ್ವಕವಿಯಾಗಿ ಮಾನ್ಯ ಮಾಡಿದ್ದ ರಾಜ್ಯ ಸರ್ಕಾರ ಜ್ಞಾನಪೀಠ ಪ್ರಶಸ್ತಿ ಸಿಗುವಂತೆ ಮಾಡಿದ್ದರೆ ಕರ್ನಾಟಕದ ಹಿರಿಮೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಜಿಎಸ್ಎಸ್ ಹೆಸರಿನಲ್ಲಿ ನಾಡು-ನುಡಿಯ ಪ್ರಗತಿ ಹೆಚ್ಚುವ ಹಾಗೂ ಸದಾಕಾಲ ನೆನಪಿಡುವ ಯೋಜನೆಯನ್ನು ಸರ್ಕಾರ ಅನುಷ್ಟಾನಕ್ಕೆ ತರಲಿ.
- ಜೆ.ಜಿ. ನಾಗರಾಜ್, ಅಧ್ಯಕ್ಷರು, ಜಿಲ್ಲಾ ಕಸಾಪ, ಕೋಲಾರ
ಜಗದ ಕವಿ
ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಘನತೆ-ಗಾಂಭಿರ್ಯ ತಂದುಕೊಟ್ಟ ಡಾ. ಶಿವರುದ್ರಪ್ಪನವರು ಜಗದ ಕವಿ ಎಂದರೆ ಅತಿಶಯೋಕ್ತಿ ಆಗಲಾರದು. ಜಿಎಸ್ಎಸ್ ವಯಸ್ಸಿನ ಕಾರಣದಿಂದ ದೇಹ ತೇಜಿಸಿದ್ದಾರೆ. ಆದರೆ, ಅವರ ಸಾಹಿತ್ಯ, ಚಿಂಥನ-ಮಂಥನ, ವಿಚಾರ ಧಾರೆಗಳು ಚಿರಕಾಲ ಉಳಿಯುವಂತಾಗಿವೆ.
- ಡಾ. ಶಿವಪ್ಪ ಅರಿವು, ಸಾಹಿತಿ, ಮುಳಬಾಗಿಲು.
-ಪಾ.ಶ್ರೀ. ಅನಂತರಾಮ್