ಕೀಟನಾಶಕ ಬಳಕೆ ಕುರಿತ ಕಾರ್ಯಾಗಾರ
ಗುಡಿಬಂಡೆ: ಪಟ್ಟಣದ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ರೈತ ದಿನಾಚರಣೆ ಅಂಗವಾಗಿ ಕೀಟನಾಶಕ ನಿಯಂತ್ರಣ ಪ್ರಯೋಗಶಾಲೆ ಯೋಜನೆಯಡಿ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಕುರಿತು ರೈತರಿಗೆ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿದರು. ಕೃಷಿಕ ಸಮಾಜದ ಉಪಾಧ್ಯಕ್ಷ ವೈ.ಒ. ರಾಮಕೃಷ್ಣಾರೆಡ್ಡಿ, ರೈತನ ಸಮಸ್ಯೆಗಳಿಗೆ ಈವರೆಗೂ ಯಾವುದೇ ಸರ್ಕಾರ ಪರಿಹಾರ ನೀಡಿಲ್ಲ. ಸರ್ಕಾರಿ ದಿನಾಚರಣೆಗಳಂತೆ ಆಚರಿಸಬೇಕಾದ ರೈತ ದಿನಾಚರಣೆ ಇಂದು ಕೇವಲ 4 ಗೋಡೆಗಳ ಮಧ್ಯೆ ಆಚರಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆನಂದರೆಡ್ಡಿ, ಪ್ರಸಕ್ತ ವರ್ಷದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಒಳ್ಳೆಯ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಿದ್ದು, ಉತ್ತಮ ಫಸಲನ್ನು ರೈತ ಪಡೆದಿದ್ದಾನೆ. ರೈತರು ಇಲಾಖೆಗಳಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ ಎಂದರು. ರೈತ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಜನಪ್ರತಿನಿಧಿಗಳು ಸ್ವಾರ್ಥ ಮನೋಭಾವನೆ ಬೆಳೆಸಿಕೊಂಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿಯಾದರೂ ಅದಕ್ಕೆ ನಿಗದಿಪಡಿಸಿದ ಮಾನದಂಡಗಳು ರೈತನಿಗೆ ನ್ಯಾಯ ಒದಗಿಸುವ ರೀತಿಯಲ್ಲಿಲ್ಲ ಎಂದರು.
ಕಾರ್ಯಾಗಾರದಲ್ಲಿ ರೈತರಿಗೆ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಕುರಿತ ತರಬೇತಿಯನ್ನು ತರಬೇತಿ ಅಧಿಕಾರಿ ಆನಂದ್ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ತಾಪಂ ಸದಸ್ಯ ನಾರಾಯಣಸ್ವಾಮಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ರೇಷ್ಮೆ ಇಲಾಖೆಯ ಮ.ಗ. ಹೆಗಡೆ, ಕೃಷಿ ಅಧಿಕಾರಿ ಶಂಕರಯ್ಯ, ವಾಹಿನಿ ಸಂಸ್ಥೆಯ ಎಚ್.ಆರ್. ಸುರೇಶ್, ಆತ್ಮ ಯೋಜನೆಯ ರಘು ಇದ್ದರು.