ನಾಮ್‌ಕೇವಾಸ್ತೆ ಅಧ್ಯಯನ
ಬಂಗಾರಪೇಟೆ: ಸತತವಾಗಿ ತಾಲೂಕನ್ನು ಬರ ಆವರಿಸಿದ್ದು ರೈತಾಪಿ ವರ್ಗ ತತ್ತರಿಸಿ ಹೋಗಿರುವುದರಿಂದ ರಾಜ್ಯ ಸರ್ಕಾರ ತಾಲೂಕನ್ನು ಮತ್ತೆ ಬರಪೀಡಿತ ತಾಲೂಕೆಂದು ಘೋಷಿಸಿದೆ. ತಾಲೂಕಿನಲ್ಲಿ ಬರ ಅಧ್ಯಯನ ಮಾಡಲು ಸೋಮವಾರ ಇಲ್ಲಿಗೆ ಭೇಟಿ ನೀಡಿದ್ದ ಬರ ಅಧ್ಯಯನ ತಂಡ ಬರೀ ಹೆಸರಿಗೆ ಬಂದಂತಿತ್ತು.
ಸತತವಾಗಿ ಬರ ತಂಡವಾಡುತ್ತಿರುವ ತಾಲೂಕಿನಲ್ಲಿ ಇದುವರೆಗೂ ಯಾವುದೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳದೆ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಮೂರು ವರ್ಷದಿಂದ ಬರ ಘೋಷಣೆಯಾಗಿದೆ ಅಷ್ಟೇ ಯಾವುದೇ ಉಪಯೋಗವಾಗಿಲ್ಲ ಈಗ ಮತ್ತೆ ಘೋಷಿಸಲಾಗಿದೆ. ಬರ ಅಧ್ಯಯನ ಮಾಡಿ ವರದಿ ಸಲ್ಲಿಸಲು ಆಗಮಿಸಿದ್ದ ಕೇಂದ್ರ ತಂಡ ಪಟ್ಟಣದ ಗಂಗಮ್ಮನಪಾಳ್ಯ ಬಡಾವಣೆಗೆ ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿತೆ ವಿನಃ ಪಟ್ಟಣಕ್ಕಿಂತಲೂ ಬರ ಗ್ರಾಮೀಣ ಭಾಗದಲ್ಲಿ ಅಧಿಕವಾಗಿ ಕಾಡುತ್ತಿದ್ದು ಆ ಕಡೆ ಮುಖ ಮಾಡದೆ ಬರ ತಂಡ ಬರೀ ಅಧಿಕಾರಿಗಳು ತೋರಿಸಿದ ಕಡೆ ಮಾತ್ರ ಹೆಸರಿಗೆ ಹೋಗಿ ದಾರಿ ಹೋಕರನ್ನು ವಿಚಾರಿಸಿ ನಿಗರ್ಮಿಸಿದ್ದು ರೈತರನ್ನು ಮತ್ತೆ ಕೆರಳುವಂತೆ ಮಾಡಿತು. ಕಳೆದ ವರ್ಷ ಸಹ ಬರ ಅಧ್ಯಯನ ತಂಡ ತಾಲೂಕಿಗೆ ಬಂದರಾದರೂ ಕೇವಲ ಎರಡು ಗ್ರಾಮಗಳಿಗೆ ಮಾತ್ರ ಹೋಗಿ ತೆರಳಿದರು ಈ ವರ್ಷ ಮತ್ತೆ ಬಡಮಾಕನಹಳ್ಳಿ, ಹುನ್ಕುಂದ ಮತ್ತಿತರೆ ಗ್ರಾಮಕ್ಕೆ ಹೋಗಿ ವಾಪಸ್ ಆಗಿದ್ದಾರೆ. ಬರ ತಂಡದ ಜೊತೆ ಸ್ಥಳೀಯ ಶಾಸಕರು ಇದ್ದು ತಂಡಕ್ಕೆ ಬರದಿಂದ ಆಗಿರುವ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕಿತ್ತು. ಆದರೆ ಬಿಡುವಿಲ್ಲದ ಕಾರ್ಯಕ್ರಮಗಳಿದ್ದರಿಂದ ಅವರು ಅವರ ಜೊತೆ ಗೈರು ಹಾಜರಾಗಿದ್ದರು.ತಂಡಕ್ಕೆ ಕುಡಿಯುವ ನೀರಿಗಾಗಿ 28 ಕೋಟಿ ಅನುದಾನ ಮಂಜೂರು ಮಾಡುವಂತೆ ಕೋರಲಾಗಿದೆ ಮತ್ತು ಆಗಬೇಕಿರುವ ಕಾಮಗಾರಿಗಳನ್ನು ಸಹ ಎಲೆ ಎಲೆಯಾಗಿ ವಿವರಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು ಶಾಸಕ ಎಸ್.ಎನ್. ನಾರಾಯಣಸ್ವಾಮಿ. ಕೆಜಿಎಫ್ ಕ್ಷೇತ್ರದ ಕೆಲ ಗ್ರಾಮಗಳಿಗೂ ಬರ ತಂಡ ಬೇಟಿ ನೀಡಿದರೂ ಸ್ಥಳೀಯ ಶಾಸಕಿ ವೈ. ರಾಮಕ್ಕರಿಗೆ ಮಾಹಿತಿ ಕೊರತೆಯಿಂದ ಅವರೂ ತಂಡದೊಂದಿಗೆ ಹೋಗದೆ ಗೈರು ಹಾಜರಾಗಿದ್ದರು.ಇವರಲ್ಲದೆ ಜಿಪಂ ಹಾಗೂ ಗ್ರಾಮ ಪಂ-ಅಧ್ಯಕ್ಷರೂ ಹೋಗದೆ ಇದ್ದದ್ದು ಇದು ಜನರ ಕಣ್ಣೊರೆಸುವ ತಂತ್ರ ಎಂಬುದು ಅರಿವಾಯಿತು. ಪ್ರತಿ ವರ್ಷ ಬರ ತಂಡ ತಾಲೂಕಿಗೆ ಬರುತ್ತಲೇ ಇದೆಯಾದರೂ ಇದುವರೆಗೂ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸ್ವತಃ ಬರ ಅಧ್ಯಯನ ತಂಡದ ಸದಸ್ಯರಿಗೂ ಮಾಹಿತಿ ಇಲ್ಲ. ಇಷ್ಟಕ್ಕೆ ಅಧ್ಯಯನ ಮಾಡುವ ಉದ್ದೇಶವಾದರೂ ಏನಿತ್ತು. ಮೂರು ವರ್ಷಗಳಿಂದ ಬರ ಆವರಿಸಿದ್ದರೂ ತಾಲೂಕಲ್ಲಿ ಬದಲಾವಣೆ ಮಾತ್ರ ಏನು ಆಗಿಲ್ಲ ಯಾವುದೇ ಬರ ಕಾಮಗಾರಿಗಳು ಇಧುವರೆಗೂ ನಡೆದ ಉದಾಹರಣೆ ಇಲ್ಲ ಎಂದು ರೈತರು ಸರ್ಕಾರದ ಧೋರಣೆಯನ್ನು ಟೀಕಿಸುತ್ತಿದ್ದರು. ಜಿಲ್ಲಾಧಿಕಾರಿ ಡಿ.ಕೆ. ರವಿ, ತಹಸೀಲ್ದಾರ್ ಉಷಾ, ಇಒ ಕೆ.ಎಸ್. ಭಟ್ ಮತ್ತಿತರರು ಇದ್ದರು.