ಇಂಚರ-2014: ವಿವಿಧೆಡೆಯಿಂದ ಅಂಗವಿಕಲರು
ಚಿಕ್ಕಬಳ್ಳಾಪುರ: ಯುವ ಶ್ರವಣ ನ್ಯೂನತೆಯುಳ್ಳ ವ್ಯಕ್ತಿಗಳ ಮತ್ತು ಪೋಷಕರ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಇಂಚರ-2014 ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ನಗರದ ಹೊರ ವಲಯದಲ್ಲಿರುವ ಸಿವಿವಿ ಕ್ಯಾಂಪಸ್ನಲ್ಲಿ ಡಿ.24 ರಿಂದ ಡಿ.27 ರವರೆಗೆ ಯುವ ಶ್ರವಣ ನ್ಯೂನ್ಯೂತೆಯುಳ್ಳ ವ್ಯಕ್ತಿಗಳು ಮತ್ತು ಪೋಷಕರಿಗೆ ಕೈ ಸನ್ನೆ ಭಾಷೆಯ ಕುರಿತು ಅರಿವು ಮೂಡಿಸುವುದಲ್ಲದೇ ಪರಸ್ಪರ ಸಮನ್ವಯ ಸಾಧಿಸುವ ತರಬೇತಿ ಕಾರ್ಯಕ್ರಮಕ್ಕೆ ಜಿ.ಪಂ. ಅಧ್ಯಕ್ಷ ಚಿನ್ನಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೈ, ಕಣ್ಣು, ಕಾಲು ದೋಷವುಳ್ಳ ಅಂಗವಿಕಲರನ್ನು ಸುಲಭವಾಗಿ ಗುರುತಿಸಬಹುದು. ಆದರೆ, ಶ್ರವಣ ನ್ಯೂನ್ಯತೆಯುಳ್ಳ ಅಂಗವಿಕಲರನ್ನು ಗುರುತಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಪಿಡಿ ಸಂಸ್ಥೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ವಿ. ಶಿಕ್ಷಣ ದತ್ತಿಯ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ,ಅಂಗವಿಕಲರು ಸಾಮಾನ್ಯರಂತೆ ಸಮಾಜದಲ್ಲಿ ಜೀವನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸವಲತ್ತುಗಳನ್ನು ಒದಗಿಸುತ್ತಿದೆ. ಇದರ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಸಹ ಅಂಗವಿಕಲರ ಹಿತ ರಕ್ಷಣೆಗೆ ಶ್ರಮಿಸುತ್ತಿರುವುದು ಮೆಚ್ಚಬೇಕಾದ ವಿಷಯ ಎಂದರು.