ಎತ್ತಿನಹೊಳೆಯಲ್ಲಿ ಕೊಚ್ಚಿಹೋಗುತ್ತಿದೆ ಕೋಟಿಕೋಟಿ ಹಣ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ. 24
ಬಿಜೆಪಿ ನಾಯಕರು ಹೂ ಮುಡಿಸುವುದು, ಕಾಂಗ್ರೆಸ್ನವರು ಟೋಪಿ ಹಾಕುವುದು, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತೆ ಟಾಟಾ ಮಾಡೋದು ಬೇಡ... ಎತ್ತಿನಹೊಳೆ ಯೋಜನೆಯಿಂದ ಹಣ ಲೂಟಿ ಮಾಡುತ್ತಾರೋ, ನೀರು ಕೊಡುತ್ತಾರೋ ಮೊದಲು ಸ್ಪಷ್ಟಪಡಿಸಲಿ ಎಂದು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಬಗ್ಗೆ ಬಯಲುಸೀಮೆಯ ಐದು ಜಿಲ್ಲೆಯ ಜನರನ್ನು ಕತ್ತಲಲ್ಲಿ ಇಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಂದ ನಂತರವಂತೂ ಎತ್ತಿನಹೊಳೆ ಯೋಜನೆ ಎಂದು ಹೇಳಿಕೊಂಡು ಹಣ ಲೂಟಿ ಮಾಡಲಾಗುತ್ತಿದೆ. ಇವರ ಜತೆಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಕೂಡ ಸೇರಿಕೊಂಡರು. ನಾಲ್ಕು ವರ್ಷದಿಂದ ಎತ್ತಿನಹೊಳೆ ಯೋಜನೆ ಮೂಲಕ ಶಾಶ್ವತ ನೀರು ಕೊಡುತ್ತೇವೆ ಎಂದು ಹೇಳಿ ಹಣ ಲೂಟಿ ಮಾಡುತ್ತಿದ್ದಾರೆ. ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಟೀಕಿಸಿದರು.
ಆದಿಚುಂಚನಗಿರಿ ಸ್ವಾಮೀಜಿ ಅಭಿನಂದನಾ ಸಮಾರಂಭದಲ್ಲಿ ಇತ್ತೀಚೆಗೆ ಕೇಂದ್ರ ಸಚಿವರಾದ ವೀರಪ್ಪ
ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಸಚಿವ ಬಚ್ಚೇಗೌಡ ಶಾಶ್ವತ ನೀರಾವರಿ ಬಗ್ಗೆ ಮಾತನಾಡಿ, ಎತ್ತಿನಹೊಳೆ ಬಗ್ಗೆ ಹೇಳಿದ್ದಾರೆ. ಹೇಳುತ್ತಲೇ ಹೋದರೆ ಯೋಜನೆ ಜಾರಿ ಆಗುವುದು ಯಾವಾಗ? ಕೇವಲ ಶಂಕುಸ್ಥಾಪನೆ ಕಲ್ಲು ಹಾಕುವುದು ಬೇಡ. ಯೋಜನೆ ಕಾಮಗಾರಿ ಆರಂಭಿಸಲಿ. ಎಲ್ಲಿಂದ ನೀರು ತರಲಾಗುತ್ತದೋ ಅಲ್ಲೇ ಶಂಕುಸ್ಥಾಪನೆ ಮಾಡಲಿ. ನಾವೆಲ್ಲ ಬೆಂಬಲ ನೀಡುತ್ತೇವೆ ಎಂದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಇನ್ನೂ ಸಮಗ್ರ ಯೋಜನೆ ವರದಿ (ಡಿಪಿಆರ್) ಸಿದ್ಧವಾಗಿಲ್ಲ. ಪರಮಶಿವಯ್ಯ ಅವರ ವರದಿ ಜಾರಿ ಮಾಡಿ ಎಂದು ಒಂದು ವರ್ಗ ಹೋರಾಟ ಮಾಡುತ್ತಲೇ ಬಂದಿದೆ. ಆದರೆ, ಕರ್ನಾಟಕ ನೀರಾವರಿ ನಿಗಮ ಹೇಳುವ ಪ್ರಕಾರ ಪರಮಶಿವಯ್ಯ ವರದಿಗೂ ಎತ್ತಿನಹೊಳೆ ಯೋಜನೆಗೂ ಸಂಬಂಧ ಇಲ್ಲ. ಸಂಬಂಧ ಇರುವ ಯೋಜನಾ ವರದಿ ಕೇಳಿದರೆ ಅವರಲ್ಲಿ ಲಭ್ಯ ಇಲ್ಲ. ಡಿಪಿಆರ್ ಇಲ್ಲವೆಂದ ಮೇಲೆ ಯಾವ ಟೆಂಡರ್ ಕರೆಯುತ್ತೀರಿ, ಯಾವಾಗ ಕಾಮಗಾರಿ ಆರಂಭಿಸುತ್ತೀರಿ ಎಂದು ಪ್ರಶ್ನಿಸಿದರು.
ಸುಳ್ಳು ಹೇಳುವುದು ಮೊಯ್ಲಿ ಜನ್ಮಗುಣ. ಎತ್ತಿನಹೊಳೆ ಬಗ್ಗೆ ಸುಳ್ಳು ಹೇಳಿಕೊಂಡೆ ಮತ್ತೊಮ್ಮೆ ಮತ ಪಡೆಯಲು ಮುಂದಾಗಿದ್ದಾರೆ. ಅದನ್ನು ಬಿಟ್ಟು, ಇದೀಗ ಹೆಚ್ಚುವರಿಯಾಗಿ ಅರಣ್ಯ ಖಾತೆಯನ್ನೂ ಹೊಂದಿರುವ ಅವರು ಎತ್ತಿನಹೊಳೆ ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಅರಣ್ಯ ಇಲಾಖೆಯಿಂದ
ಅನುಮತಿಯನ್ನು ಕೂಡಲೇ ದೊರಕಿಸಿಕೊಡಲಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ 2012ರಲ್ಲೇ 2689 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಎತ್ತಿನಹೊಳೆ ಯೋಜನೆಗೆ ಟೆಂಡರ್ ಸಿದ್ಧವಾಗಿಲ್ಲ ಎಂದು ನೀರಾವರಿ ನಿಗಮ ಹೇಳುತ್ತಿದೆ. ಒಟ್ಟಾರೆ 8263 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿರುವುದಾದರೂ ಎಲ್ಲಿ? ಅಲ್ಲದೆ, ಯೋಜನಾ ವರದಿ ತಯಾರಿಕೆಗೇ 1000 ಕೋಟಿಯನ್ನು ಈ ಬಾರಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಅಂದರೆ ಆರಂಭವಾಗಿರುವ ಕಾಮಗಾರಿ ಯಾವುದು? ಜನರಿಗೆ ಎತ್ತಿನಹೊಳೆ ಹೆಸರಿನಲ್ಲಿ ಬಿಜೆಪಿ ಹಾಗೂ ಮೊಯ್ಲಿ ಇಬ್ಬರೂ ಸೇರಿಕೊಂಡು ಮೋಸ ಮಾಡುತ್ತಿದ್ದಾರೆ. ಹಣ ಹೊಡೆಯುವ ಯೋಜನೆ ಇದಾಗಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿದ್ದಾಗ ಎತ್ತಿನಹೊಳೆ ಬಗ್ಗೆ ಮಾತನಾಡುತ್ತಾರೆ. ಮಂಗಳೂರು ಭಾಗಕ್ಕೆ ಹೋದಾಗ ಬೇರೆ ಮಾತನಾಡುತ್ತಾರೆ. ಅವರಿಗೆ ಒಂದು ನಿಲುವಿಲ್ಲ ಎಂದು ಟೀಕಿಸಿದರು.