ಕಚೇರಿಗಳಲ್ಲಿ ಒಂದು ಗಂಟೆ ಕಾಲ ಹೆಚ್ಚು ಕೆಲಸ ಮಾಡಿ ಜಿಎಸ್ಎಸ್ಗೆ ಗೌರವ
ಕ.ಪ್ರ.ವಾರ್ತೆ ಕೋಲಾರ ಡಿ.24
ಕನ್ನಡ ನಾಡು, ನುಡಿಯ ಏಳಿಗಾಗಿ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಒಂದು ಗಂಟೆಗಳ ಕಾಲ ಹೆಚ್ಚು ಕೆಲಸ ಮಾಡುವ ಮೂಲಕ ನಮ್ಮನ್ನು ಅಗಲಿರುವ ಕನ್ನಡ ಸಾರಸ್ವತ ಲೋಕದ ಆಗ್ರ ಸಾಹಿತಿ, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ಚಿರಶಾಂತಿ ಕೋರೋಣ ಹಾಗೂ ಭಕ್ತಿಪೂರ್ವಕ ಶ್ರದ್ಧಾಂಜಲಿ ಸಮರ್ಪಿಸೋಣವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಹಿರಿಯ ಚೇತನ ಡಾ.ಜಿ.ಎಸ್. ಶಿವರುದ್ರಪ್ಪನವರ ನಿಧನದ ಹಿನ್ನಲೆಯಲ್ಲಿ ನಗರದ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಆಡಳಿತದ ಪರವಾಗಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್ಎಸ್ ಅವರು ಕನ್ನಡ ಭಾಷೆ, ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆಂದು ಬಣ್ಣಿಸಿದರು.
ಕೀರ್ತಿ ಮತ್ತು ಅನುಭೂತಿಯ ಮೂಲಕ ಕೆಲವರು ಮಾತ್ರ ಜನತೆಯ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ, ಇದರಲ್ಲಿ ಜಿಎಸ್ಎಸ್ ಅವರು ಒಬ್ಬರು. ಈ ಹಿರಿಯ ಚೇತನರಿಗೆ ನಿಜವಾದ ಗೌವರ ತರುವ ಕೆಲಸವೇನಾದರೂ ಆಗಬೇಕೆಂಬ ಆಸೆ ನಾಡಿನ ಜನತೆಗಿದ್ದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ದಿನಕ್ಕೆ ಒಂದು ಗಂಟೆ ಹೆಚ್ಚು ಕೆಲಸ ಮಾಡಲು ಸಂಕಲ್ಪ ಮಾಡಿದಾಗ ಮಾತ್ರ ಜಿಎಸ್ಎಸ್ ಆಶಯಗಳನ್ನು ಈಡೇರಿಸಿದಂತಾಗುತ್ತದೆ ಎಂದರು.
ಪತ್ರಕರ್ತ ಕೆ. ನರಸಿಂಹಮೂರ್ತಿ ಮಾತನಾಡಿ, ಕೇವಲ ಸಂತಾಪ ಸಭೆ, ಶ್ರದ್ಧಾಂಜಲಿ ಸಮರ್ಪಣೆಯಿಂದ ಜಿಎಸ್ಎಸ್ ಅವರ ಆತ್ಮಶಾಂತಿ ಸಿಗಲಾರದು, ನಾಡಿನ ಪ್ರತಿಯೊಬ್ಬರು ಜಿಎಸ್ಎಸ್ ಅವರು ಬರೆದಿರುವ ಅಮೂಲ್ಯವಾದ ಕೃತಿಗಳನ್ನು ಓದುವ ಮೂಲಕ ಅಗಲಿರುವ ಹಿರಿಯ ಚೇತನನ ನೆನಪು ಚಿರಕಾಲ ಉಳಿಯುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಮನ್ವಯತೆ ಕಾಯ್ದುಕೊಳ್ಳುವುದು ಕಷ್ಟ. ಜಿಎಸ್ಎಸ್ ಅವರು ತಮ್ಮ ಜೀವತದ ಅವಧಿಯಲ್ಲಿ ಸಾಹಿತ್ಯದ ಮೂಲಕ ಸಾಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ನಾಡಿನ ಜನತೆ ಇವರ ಕೃತಿಗಳನ್ನು ಓದಿದಾಗ ಮಾತ್ರ ಅವರಂತೆ ನಾವು ಕೀರ್ತಿ ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ.ನಾಗರಾಜ ಪ್ರಸ್ತಾವಿಕವಾಗಿ ಮಾತನಾಡಿ, ಡಾ.ಜಿ.ಎಸ್. ಶಿವರುದ್ರಪ್ಪನವರು ಗುರುಗಳಾಗಿ, ಸಾಹಿತಿಗಳಾಗಿ ನಾಡಿಗೆ ನೀಡಿರುವ ಸೇವೆ ಶ್ಲಾಘನೀಯವೆಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಸಾಹಿತಿ ಕೋಗಿಲಹಳ್ಳಿ ಕೃಷ್ಣಪ್ಪ, ಚಿಂತಕ, ಖಗೋಳ ಶಾಸ್ತ್ರದ ಪರಿಣಿತ ಕೆನರಾ ಬ್ಯಾಂಕಿನ ಶಾಸ್ತ್ರಿ, ಅ.ಕೃ. ಸೋಮಶೇಖರ್, ಕಲಾವಿದ ವಿಷ್ಣು, ತ್ಯಾಗರಾಜ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ. ಶ್ರೀನಿವಾಸ್, ಕಸಾಪ ಪದಾಧಿಕಾರಿಗಳಾದ ಮಾಲೂರು ಅಶ್ವತ್ಥರೆಡ್ಡಿ, ಪುರುಷೋತ್ತಮ್, ಬಾನು ಪ್ರಕಾಶ್, ಉಪನ್ಯಾಸಕ ಟಿ.ಕೆ. ನಟರಾಜ್, ನಾಗನಂದ ಕೆಂಪರಾಜ್, ರತ್ನಪ್ಪ, ಚಂದ್ರಪ್ಪ, ಆದಿಮ ಬಳಗದ ಗೋವಿಂದಪ್ಪ, ವಕೀಲ ಮಾಗೇರಿ ನಾರಾಯಣಸ್ವಾಮಿ, ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಿದ್ದರು.
ಖ್ಯಾತ ಗಾಯಕರಾದ ಪಿಚ್ಚಹಳ್ಳಿ ಶ್ರೀನಿವಾಸ್ ಹಾಗೂ ಜನ್ನಘಟ್ಟ ಕೃಷ್ಣಮೂರ್ತಿ ಅವರು ಡಾ.ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ಕವಿತೆಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.