ಕೋಚಿಮುಲ್ ನೇಮಕಾತಿ ರದ್ದು
ಪಾ.ಶ್ರೀ. ಅನಂತರಾಮ್
ಕೋಲಾರ: ಜಿಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 83 ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕೇಳಿ ಬಂದ ಆರೋಪದ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆಡಳಿತ ಮಂಡಳಿ ರದ್ದುಪಡಿಸಿದೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಉಲ್ಲಂಘನೆ ಮಾಡಿ ಅರ್ಹ ಅಭ್ಯರ್ಥಿಗಳಿಗೆ ವಂಚನೆ ಮಾಡಲಾಗುತ್ತಿದೆ ಎಂದು ಕನ್ನಡಪ್ರಭದಲ್ಲಿ ವರದಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಮಂಗಳವಾರ ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಚರ್ಚಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಡಿ.26, 27 ಮತ್ತು 28 ರಂದು ಮೂರು ದಿನಗಳು ವಿವಿಧ ಹಂತದಲ್ಲಿ ನಡೆಸಬೇಕಾಗಿದ್ದ ಸಂದರ್ಶನವನ್ನು ರದ್ದುಪಡಿಸಿದೆ.
ಸಭೆಯಲ್ಲಿ ಅನೇಕ ನಿರ್ದೇಶಕರು ಗೈರು ಹಾಜರಾಗಿದ್ದರು. ಭಾಗವಹಿಸಿದ್ದ ನಿರ್ದೇಶಕರಲ್ಲಿ ಕೆಲವರು ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗುವುದಕ್ಕೆ ಹಾಲು ಒಕ್ಕೂಟದ ನಿರ್ವಾಹಕ ನಿರ್ದೇಶಕರ ಬೇಜವಾಬ್ದಾರಿಯೇ ಕಾರಣವೆಂದು ಆರೋಪಿಸಿದಾಗ ಮಾತಿನ ಚಕಮಕಿ ಉಂಟಾಯಿತು.
ನಿರ್ವಾಹಕ ನಿರ್ದೇಶಕ ಹನುಮೇಶ್, ಒಕ್ಕೂಟದಲ್ಲಿ ಎಂವೈಎಸ್ ಅಧಿಕಾರಿಯಾಗಿರುವ ಭಾವಮೈದುನ ವೆಂಕಟೇಶ ಪ್ರಸಾದ್ ಹಾಗೂ ನಿವೃತ್ತ ಆಡಳಿತಾಧಿಕಾರಿ ಕೆ.ವಿ. ನಾರಾಯಣಸ್ವಾಮಿಯವರ ಹಸ್ತಕ್ಷೇಪದಿಂದಾಗಿ ವಿವಿಧ ಹುದ್ದೆಗಳಿಗೆ ನಡೆದ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬರಲು ಕಾರಣವಾಗಿದೆ. ಆಡಳಿತ ಮಂಡಳಿಯೇ ನೇಮಕಾತಿ ಪ್ರಕ್ರಿಯೆ ರದ್ದು ಮಾಡದಿದ್ದರೆ ಸರ್ಕಾರ ಮಧ್ಯ ಪ್ರವೇಶ ಮಾಡಿ ಛೀಮಾರಿ ಹಾಕುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ 86 ವಿವಿಧ ಹುದ್ದೆಗಳಿಗೆ ನಡೆಯಬೇಕಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಆಡಳಿತ ಮಂಡಳಿ ಸಭೆ ರದ್ದು ಮಾಡಿದೆ.
ಹಾಲು ಒಕ್ಕೂಟದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಸಹಕಾರ ಇಲಾಖೆಯ ನಿಯಮಗಳ ಪ್ರಕಾರ ಸಹಕಾರ ಇಲಾಖೆಯ ನಿಬಂಧಕರು ಸಮಿತಿಯಲ್ಲಿ ಇರುವುದು ಕಡ್ಡಾಯ. ಆದರೆ, ಸಹಕಾರ ಇಲಾಖೆಯನ್ನು ದೂರವಿಟ್ಟು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ನಿವೃತ್ತ ಅಧಿಕಾರಿಯನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿರುವುದು ಅಪರಾಧವೆಂದು ನಿರ್ದೇಶಕರು ನಿರ್ವಾಹಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅಧ್ಯಕ್ಷರು ಈ ವಿಚಾರದಲ್ಲಿ ಅಸಹಾಯಕರಂತೆ ವರ್ತಿಸಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಹಾಲು ಉತ್ಪಾದಕರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಅವರ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಬೇಕಾಗಿದ್ದ ಅಧಿಕಾರಿಗಳು ಮೀಸಲಾತಿ ಹಾಗೂ ರೋಸ್ಟರ್ ನಿಯಮ ಪಾಲಿಸಿಲ್ಲ, ನಕಲಿ ಅಂಕಪಟ್ಟಿಗಳನ್ನು ನೀಡಿರುವವರಿಗೆ ಸಂದರ್ಶನಕ್ಕೆ ಆಹ್ವಾನ ಕಳುಹಿಸಲಾಗಿದೆ, ವಿದ್ಯಾವಂತರು, ಅರ್ಹರು ಅರ್ಜಿಯೊಂದಿಗೆ ಸಲ್ಲಿಸಿದ್ದ ಅಂಕಪಟ್ಟಿ ಹಾಗೂ ಡಿಡಿಗಳನ್ನು ಬೇಕಾಗಿಯೇ ಅಧಿಕಾರಿಗಳು ಕಡತದಿಂದ ತೆಗೆದು ಹಾಕಿ ಅನ್ಯಾಯ ಮಾಡಿದ್ದಾರೆಂದು ಕೆಲ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮತ್ತು ಹಾಲು ಒಕ್ಕೂಟದ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ನೇಮಕಾತಿಯ ಬಗ್ಗೆ ನಡೆದ ಸಭೆಯಲ್ಲಿ ಚರ್ಚಿಸಿ ಮುಂದೆ ಆಗುವ ಮುಜುಗರದಿಂದ ಪಾರಾಗುವ ಸಲುವಾಗಿ ನೇಮಕಾತಿಯನ್ನು ರದ್ದು ಮಾಡಿರುವುದರಿಂದ ಅರ್ಹರು ನಿಟ್ಟುಸಿರು ಬಿಡುವಂತಾಗಿದೆ.
ಈಗಾಗಲೇ ಕೆಲಸಕ್ಕಾಗಿ ಲಕ್ಷಾಂತರ ರು. ನೀಡಿರುವ ಕೆಲವರು ಒಕ್ಕೂಟದ ನಿರ್ಧಾರದಿಂದ ಪೇಚಿಗೆ ಸಿಲುಕಿದ್ದಾರೆ, ಹಣ ವಾಪಸ್ ಪಡೆಯಲು ಇವರು ಹರ ಸಾಹಸ ಮಾಡುವಂತಾಗಿದೆ.
ಈ ಹಿಂದೆ ಒಕ್ಕೂಟದಲ್ಲಿ ಆಗಿರುವ ಎರಡು ನೇಮಕಾತಿ ಪ್ರಕ್ರಿಯೆಯಲ್ಲೂ ಲೋಪಗಳು ಆಗಿರುವ ಬಗ್ಗೆ ಕೆಲವರು ಲೋಕಾಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳು ಸಲ್ಲಿಸುವ ದಾಖಲೆಗಳನ್ನು ಸಂಬಂಧಪಟ್ಟ ಶಾಲಾ-ಕಾಲೇಜು, ವಿವಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗೆ ಕಳುಹಿಸಿ ದಾಖಲೆಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಆ ನಂತರ ನೇಮಕಾತಿ ಆದೇಶ ಪತ್ರ ನೀಡಬೇಕು. ಆದರೆ, ಈ ಹಿಂದೆ ಎರಡು ಬಾರಿ ಆಗಿರುವ ನೇಮಕಾತಿ ಪ್ರಕ್ರಿಯೆಯಲ್ಲೂ ಸಾಕಷ್ಟು ಲೋಪಗಳು ಆಗಿರುವುದರಿಂದ ತನಿಖೆಗೆ ಕೋರಿ ಲೋಕಾಯುಕ್ತರಿಗೆ ದೂರು ನೀಡುವುವದಕ್ಕೆ ಕೆಲ ಸಹಕಾರಿಗಳು ಮುಂದಾಗಿದ್ದು, ನಿಜಕ್ಕೂ ಲೋಕಾಯುಕ್ತರಿಂದ ತನಿಖೆ ಆದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಸಾಕಷ್ಟು ಹಗರಣ ಬಯಲಿದೆ ಬರುವ ಸಾಧ್ಯತೆಗಳು ಇವೆಯಲ್ಲದೆ, ರಾಜ್ಯದ ವಿವಿಧ ಹಾಲು ಒಕ್ಕೂಟದ ಮೇಲೂ ಇದರ ಪರಿಣಾಮ ಬೀರುವುದನ್ನು ತಳ್ಳಿ ಹಾಕುವಂತಿಲ್ಲ.
ನಿರ್ವಹಕ ನಿರ್ದೇಶಕರ ಹೇಳಿಕೆ: ಜಿಲ್ಲಾ ಹಾಲು ಒಕ್ಕೂಟದ 83 ವಿವಿಧ ಹುದ್ದೆಗಳ ನೇಮಕಾತಿಗಾಗಿ 2013ರ ಅಕ್ಟೋಬರ್ 11 ರಂದು ನೀಡಿದ್ದ ಪ್ರಕರಣೆ ಅನ್ವಯ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ರೋಸ್ಟರ್ ರೀತ್ಯಾ ಸಂದರ್ಶನಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ನೇಮಕಾತಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಅವುಗಳನ್ನು ಬಗೆಹರಿಸುವ ಕಾರಣ ನೇಮಕಾತಿ ರದ್ದು ಮಾಡಲಾಗಿದೆ ಎಂದು ಒಕ್ಕೂಟದ ನಿರ್ವಹಕ ನಿರ್ದೇಶಕ ಹನಮೇಶ್ ಹೇಳಿಕೆ ನೀಡಿದ್ದಾರೆ. ನೇಮಕಾತಿ ರದ್ದು ಹಿನ್ನಲೆಯಲ್ಲಿ ಎಲ್ಲಾ ಅರ್ಜಿದಾರರಿಗೆ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದೆಂದು ತಿಳಿಸಿದ್ದಾರೆ.
ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ತೀವ್ರ ಕುತೂಹಲ ಮೂಡಿಸಿದ್ದ ಕೆಜಿಎಫ್ ವಕೀಲರ ಸಂಘದ ಚುನಾವಣೆಯಲ್ಲಿ ಎ. ಹರಿನಾಥ್ ವಕೀಲರ ಸಂಘದ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೋಪಿ, ಜಂಟಿ ಕಾರ್ಯದರ್ಶಿಯಾಗಿ ಗೋಪಿ, ಕಣ್ಣನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ. ಮುಕುಂದ, ಮನೋಹರ್, ಶ್ರೀದೇವಿ, ತಂಗರಾಜ್, ತಿರುವೆಂಗಡಂ ಮತ್ತು ಯಮುನ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಣಿವಣ್ಣನ್ ಹಾಗೂ ಜ್ಯೋತಿಬಸು ಅವರ ಮಧ್ಯೆ ನಡೆದ ತೀವ್ರ ಪೈಪೋಟಿಯಲ್ಲಿ ಇಬ್ಬರಿಗೂ ಸಮ ಮತ ಪಡೆದಿದ್ದರಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮರು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಲಕ್ಷ್ಮೀಕಾಂತನ್ತಿಳಿಸಿದ್ದಾರೆ.