ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಕ್ಕಬಳ್ಳಾಪುರದಲ್ಲಿ ಜಿಎಸ್ಸೆಸ್ಗೆ ಭಾವಪೂರ್ಣ ಶ್ರದ್ಧಾಂಜಲಿ

Rashmi Kasaragodu
Updated On : 25 Dec 2013, 2:13 am

ಚಿಕ್ಕಬಳ್ಳಾಪುರ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ನಿಧನರಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲೆಯ ಕನ್ನಡ ಸಾಹಿತ್ಯ ಅಭಿಮಾನಿಗಳು, ಕಸಾಪ ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಂತಾಪ ಸಭೆಯಲ್ಲಿ ಹಲವರು ರಾಷ್ಟ್ರಕವಿ ಜಿಎಸ್ ಎಸ್ ಅವರ ನಿಧನಕ್ಕೆ ಕಂಬನಿ ಮಿಡಿದರು.
ಸಾಹಿತಿ ಟಿ.ಎಸ್. ನಾಗೇಂದ್ರ ಬಾಬು ಮಾತನಾಡಿ, ಜಿಎಸ್ ಎಸ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಕುವೆಂಪುರವರ ಶಿಷ್ಯರಾಗಿ ಅವರ ಹಾದಿಯಲ್ಲಿಯೇ ನಡೆದ ಜಿಎಸ್ ಎಸ್ ಜೀವನ, ಆದರ್ಶ ತತ್ವಗಳು ಶ್ಲಾಘನೀಯ. ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ ಸಹ ಅವರು ಸಾಹಿತ್ಯಕ್ಕೆ ನೀಡಿದಂತಹ ಕೊಡುಗೆಗಳು ಶಾಶ್ವತವಾಗಿರುತ್ತವೆ ಎಂದ ಅವರು, ಜಿಎಸ್ ಎಸ್ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಪಿ. ನವಮೋಹನ್ ಮಾತನಾಡಿ, ಒಬ್ಬ ಮಹಾನ್ ಸಾಹಿತಿಯಿಂದ ಅನೇಕ ಮಂದಿ ಶಿಷ್ಯಂದಿರು ರೂಪುಗೊಳ್ಳುತ್ತಾರೆ. ಈ ಮೂಲಕ ನವ ಸಮಾಜವನ್ನು ಕಟ್ಟುವ ಕೆಲಸವಾಗುತ್ತದೆ. ಅದೇ ರೀತಿ ಜಿಎಸ್ ಎಸ್ ಅನೇಕರಿಗೆ ಮಾರ್ಗದರ್ಶಕರು, ದಾರಿ ದೀಪವಾಗಿದ್ದಾರೆ ಎಂದರು.
ಕಲಾವಿದ ಗ.ನ. ಅಶ್ವತ್ಥ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನೇಕ ಸಾಹಿತಿ, ಕವಿಗಳ ಸಾಲಿಗೆ ಸೇರುವಲ್ಲಿ ಜಿ.ಎಸ್.ಎಸ್ ಪ್ರಮುಖರು. ಇವರ ಸಂದೇಶಗಳನ್ನು ಜನರಿಗೆ ತಿಳಿಸುವಂತಹ ಕೆಲಸವಾಗಬೇಕೆಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮತ್ ರಾವ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗಂಗಾಧರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ವಾಹಿನಿಯ ಜಿಲ್ಲಾ ವರದಿಗಾರ ರವಿಕುಮಾರ್, ಪತ್ರಕರ್ತ ಎಂ. ಕೃಷ್ಣಪ್ಪ, ಕನ್ನಡಪರ ಸಂಘಟನೆಯ ಹೋರಾಟಗಾರಾದ ಪೃಥ್ವಿ, ಮುನಿರಾಜು, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement