ಡೋಂಗಿಗಳಿಂದ ದಸಂಸ ಸಂಘಟನೆಗೆ ಹೊಡೆತ
ಕ.ಪ್ರ.ವಾರ್ತೆ ಕೋಲಾರ ಡಿ.24
ದಲಿತ ಸಂಘರ್ಷ ಸಮಿತಿಯಲ್ಲಿದ್ದ ಡೋಂಗಿಗಳಿಂದ ಸಂಘಟನೆಗೆ ಪೆಟ್ಟಾಗಿದ್ದು ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಸ್ವಾರ್ಥಿಗಳನ್ನು ದೂರವಿಟ್ಟು ಸಮಸ್ತ ದಲಿತರು ಒಗ್ಗೂಡಿ ಕೆಲಸ ಮಾಡಿದಲ್ಲಿ ಮಾತ್ರ ರಾಜ್ಯಾಧಿಕಾರ ಪಡೆಯಬಹುದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲರ ಸತ್ಯಾ ಭದ್ರಾವತಿ ತಿಳಿಸಿದರು.
ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಪರಿನಿಬ್ಬಾಣ ಹಾಗೂ ದಲಿತರ ಸ್ವತಂತ್ರ ರಾಜ್ಯಾಧಿಕಾರದೆಡೆಗೆ ಕುರಿತ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಬೆಳೆಸಲು ಹಗಲಿರುಳು ಶ್ರಮಿಸಿದ ಕೃಷ್ಣಪ್ಪನವರು ಇನ್ನಷ್ಟು ದಿನ ಬದುಕುತ್ತಿದ್ದರು. ಆದರೆ, ಕೆಲ ಸ್ವಾರ್ಥಿಗಳ ಹಾಗೂ ಡೋಂಗಿ ನಾಯಕರ ವರ್ತನೆಯಿಂದ ಕೊರಗಿ ನಮ್ಮನ್ನು ಅಗಲಿದರೆಂದು ದೂರಿದರು.
ಕೃಷ್ಣಪ್ಪನವರ ಸಮಾಧಿಯ ಮುಂದೆ ಸ್ವಾತಂತ್ರ್ಯ ರಾಜಕೀಯ ಸಾಧಿಸುವುದಾಗಿ ಪ್ರಮಾಣ ಮಾಡಿದ್ದ ಅನೇಕರು ವಚನಭ್ರಷ್ಟರಾದರು. ಈ ನಾಯಕರು ಇಂದು ಕೋಲಾರದಲ್ಲೇ ಇದ್ದಾರೆ. ಈ ಜನರನ್ನು ನಂಬಿದರೆ ಶೋಷಿತರಿಗೆ ನ್ಯಾಯ ಸಿಗಲಾರದು ಎಂದೇ ನಾವು ಚಳವಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘಟನಾ ಸಂಚಾಲಕ ಹಾಗೂ ರಾಜಕೀಯ ಸಲಹಾ ಸಮಿತಿ ಅಧ್ಯಕ್ಷ ಬಿ.ಎನ್.ಗಂಗಾಧರಪ್ಪ ಮಾತನಾಡಿ, ಡಿಎಸ್ಎಸ್ ಬೆಳಗಾವಿಯಲ್ಲಿ ಹುಟ್ಟಿದ್ದರೂ ಬೇರೂರಿದ್ದೂ ಕೋಲಾರದಲ್ಲಿ,ಡೋಂಗಿತನದ ನಾಯಕರಿಂದ ಡಿಎಸ್ಎಸ್ ಬೆಳೆಯಲಾಗಿಲ್ಲ, ಹೋರಾಟದ ರಥವನ್ನು ಮುಂದುವರೆಸುವ ಮಾತನ್ನು ಹೇಳಿದ್ದವರು ಸಂಘಟನೆಯನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡರೆಂದು ದೂರಿದರು.
ಬಿ.ಕೆ. ಹಾಕಿದ ಪಾಯವನ್ನು ಯಾರಿಂದಲೂ ಶಿಥಿಲಗೊಳಿಸಲಾದು, ಇನ್ನು ಕಾಲ ಮಿಂಚಿಲ್ಲ, ಸ್ವಾಭಿಮಾನಕ್ಕಾಗಿ ಸಂಘಟನೆಯನ್ನು ಬೆಳೆಸಲು ಒಂದಾಗಿ ಎಂದು ಕರೆ ನೀಡಿದರು.
ಹಾಸನ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಮಲ್ಲಪ್ಪ ಮಾತನಾಡಿ, ಹೆಣ್ಣೂರು ಶ್ರೀನಿವಾಸ್,ಧಾರಾವಾಡ ರಾಜ್ಯ ಸಂಘಟನಾ ಸಂಚಾಲಕ ಮರೀಶ್ ನಾಗಣ್ಣ ಮಾತನಾಡಿದರು. ಸಮಾವೇಶದಲ್ಲಿ ಸಮಾಜ ಚಿಂತಕ ಸ. ರಘುನಾಥ, ಚಿತ್ರದುರ್ಗದ ಸಂಚಾಲಕ ಡಿ.ಆರ್. ಪಾಂಡುರಂಗಸ್ವಾಮಿ, ಹಾವೇರಿ ವಾಸುದೇವ ಬಸವನವರ, ರಾಜ್ಯ ಖಜಾಂಚಿ ಭೀಮಜ್ಯೋತಿ ಸೀನು ಇದ್ದರು.
ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್ ಸ್ವಾಗತಿಸಿ, ಶ್ರೀನಿವಾಸಪುರ ಜಿಲ್ಲಾ ಸಂಚಾಲಕ ಬಿ.ವಿ. ಚಲಪತಿ ನಿರೂಪಿಸಿ, ಜಿಲ್ಲಾ ಸಂಘಟನಾ ಸಂಚಾಲಕ ನಾಗನಾಳ ಮುನಿಯಪ್ಪ ವಂದಿಸಿದರು. ಸಮಾವೇಶಕ್ಕೆ ಜಿಲ್ಲೆಯ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿದ್ದರು.