ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿತ್ರಾಣದಿಂದ ಸಾವಿನ ಮನೆಯತ್ತ ರಾಸುಗಳು

Rashmi Kasaragodu
Updated On : 25 Dec 2013, 2:13 am

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದು ರೈತರನ್ನು ತಲ್ಲಣಗೊಳಿಸಿತ್ತು. ಇದೀಗ ವಿಚಿತ್ರ ರೋಗಕ್ಕೆ ರಾಸುಗಳು ಸಾವಿನ ಕದ ತಟ್ಟುತ್ತಿವೆ. ಇದು ಸಾಂಕ್ರಾಮಿಕವಾಗಿದ್ದು ರೋಗಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.  ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ಈ ವಿಚಿತ್ರ ರೋಗ ಕಾಣಿಸಿಕೊಂಡಿದ್ದು, ಅಲ್ಲಿನ ರೈತರನ್ನು ಕಂಗಾಲಾಗಿಸಿದೆ. ಕಳೆದ ಎರಡು ತಿಂಗಳಿಂದ ಒಂದೊಂದೇ ರಾಸುಗಳು ಎದ್ದು ನಿಲ್ಲಲಾರದೇ ಇದ್ದಕ್ಕಿದ್ದಂತೆ ನೆಲಕ್ಕುರುಳುತ್ತಿವೆ. ಎಷ್ಟೇ ಪ್ರಯತ್ನಿಸಿದರೂ ನಿಲ್ಲಿಸಲಾಗುತ್ತಿಲ್ಲ. ಜೊಲ್ಲು ಸುರಿಸುತ್ತಾ ನಿಧಾನವಾಗಿ ನಿತ್ರಾಣಗೊಂಡು ಮೃತಪಡುತ್ತಿದೆ. ಈಗಾಗಲೇ ಗ್ರಾಮದಲ್ಲಿ 13ಕ್ಕೂ ಹೆಚ್ಚು ರಾಸುಗಳು ಈ ಸೋಂಕಿಗೆ ಗುರಿಯಾಗಿದ್ದು, ಹಲವು ಮೃತಪಟ್ಟಿವೆ.
ಕಾಯಿಲೆ ಲಕ್ಷಣ: ಮೊದಲಿಗೆ ಗಂಜಲ ಹಾಕುವುದರಲ್ಲಿ ವ್ಯತ್ಯಾಸ ಕಂಡು ಬಂದ ನಂತರ ಹೊಟ್ಟೆ ಊದಿಕೊಂಡು ಇದ್ದಕ್ಕಿದ್ದಂತೆ ಜಾನುವಾರುಗಳು ಕುಸಿದು ಬೀಳುತ್ತವೆ. ಹಿಂಭಾಗದ ಕಾಲುಗಳಲ್ಲಿ ಸ್ವಾಧೀನವೇ ಇರುವುದಿಲ್ಲ. ನೀರು ಕುಡಿಯುವುದು, ಸಗಣಿ ಹಾಕುವುದು ಸೇರಿದಂತೆ ಎಲ್ಲ ಚಟುವಟಿಕೆಗಳು ಮಲಗಿದ ಸ್ಥಿತಿಯಲ್ಲೇ ಆಗುತ್ತದೆ. ಹೀಗಾದ ನಾಲ್ಕೈದು ದಿನಗಳಲ್ಲಿ ತೀವ್ರ ನಿತ್ರಾಣಗೊಂಡು ಮೃತಪಡುತ್ತಿವೆ. ಈ ರೋಗಕ್ಕೆ ಕಾರಣ ಏನು ಎನ್ನುವ ಬಗ್ಗೆ ಪಶು ವೈದ್ಯರಿಗೆ ತಿಳಿದುಬಂದಿಲ್ಲ.
ಕಸಾಯಿಖಾನೆಗೆ ಹಸುಗಳು: ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರೂ ರಾಸುಗಳಲ್ಲಿ ಚೇತರಿಕೆ ಕಂಡು ಬರುತ್ತಿಲ್ಲ. ಇಲ್ಲಿನ ಪಶುವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಿಸಬೇಕು. ಆಗ ನಿಜವಾದ ಕಾರಣ ತಿಳಿಯುತ್ತದೆ ಎಂದು ಹೇಳಿದ್ದಾರೆ. ಆದರೆ ಅದು ಕಷ್ಟ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. 3ರಿಂದ 4 ಸಾವಿರವನ್ನು ಚಿಕಿತ್ಸೆಗಾಗಿ ಸುರಿಯುತ್ತಿರುವ ರೈತರು ಬೇರೆ ದಾರಿಯಿಲ್ಲದೇ ಸುಮಾರು 60 ಸಾವಿರದಿಂದ 70 ಸಾವಿರ ಬೆಲೆ ಬಾಳುವ ರಾಸುಗಳನ್ನು ಕಸಾಯಿಖಾನೆಗಳಿಗೆ ಕೇವಲ 3 ಸಾವಿರಕ್ಕೆ ಮಾರುತ್ತಿದ್ದಾರೆ.
ಆರ್ಥಿಕ ನಷ್ಟ: ಹಾಲು ಸರಬರಾಜು ಮಾಡಿದ ಹಣದಲ್ಲಿ ರಾಸುಗಳನ್ನು ಕೊಂಡುಕೊಳ್ಳಲು ಮಾಡಿದ ಸಾಲವನ್ನು ತೀರಿಸಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಜಾನುವಾರುಗಳಿಗೆ ತಗುಲಿದ ಈ ಸೋಂಕು ತಲೆನೋವು ತಂದಿದೆ. ಚಿಕಿತ್ಸೆ ನೀಡಿದರೂ ಫಲ ಕಾಣದಿರುವಾಗ ಎಷ್ಟು ದಿನಗಳ ಕಾಲ ಸೋಂಕಿತ ಹಸುವನ್ನು ಮನೆಯಲ್ಲಿಟ್ಟುಕೊಳ್ಳುವುದು. ಇತರ ರಾಸುಗಳಿಗೂ ಸೋಂಕು ಹರಡಿದರೆ ಏನು ಗತಿ ಎಂಬ ಆತಂಕದಲ್ಲಿದ್ದಾರೆ ರೈತರು. 



ಸಾಲ ಮಾಡಿ ಖರೀದಿಸಿದ ರಾಸುಗಳಿಗೆ ಪಶು ವೈದ್ಯರ ಸೂಚನೆಯಂತೆ ಲಸಿಕೆಗಳನ್ನು ಹಾಕಿಸಿದ್ದೂ ಆಯಿತು. ಆದರೂ ರಾಸುಗಳು ಕೆಳಗೆ ಬಿದ್ದು ನರಳಾಡುತ್ತಿರುವುದು ನಿಲ್ಲುತ್ತಿಲ್ಲ.
- ಮುನಿಭೈರಪ್ಪ, ಗ್ರಾಮದ ರೈತ

ಸ್ವಾಧೀನ ಕಳೆದುಕೊಳ್ಳುತ್ತಿರುವ ರಾಸುಗಳ ಸಮಸ್ಯೆಗೆ ನಿಖರವಾದ ಕಾರಣ ತಿಳಿಯುತ್ತಿಲ್ಲ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವಿಜ್ಞಾನಿಗಳನ್ನು ಕರೆಸಿಕೊಂಡು ಪರಿಶೀಲನೆ ನಡೆಸಲಾಗುವುದು.
- ಗೋವಿಂದಪ್ಪ, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement