ಕಡ್ಡಾಯವಲ್ಲ, ಆದರೂ ತಪ್ಪಿಲ್ಲ ಪರದಾಟ
ಚಿಕ್ಕಬಳ್ಳಾಪುರ: ಸ್ವತಃ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ. ವೀರಪ್ಪ ಮೊಯ್ಲಿ ಅಡುಗೆ ಅನಿಲ ಸಂಪರ್ಕಕ್ಕೆ ಆಧಾರ್ ಕಾರ್ಡು ಸಲ್ಲಿಸುವುದು ಕಡ್ಡಾಯವಲ್ಲ ಎಂದು ತಿಳಿಸಿರುವುದರ ನಡುವೆಯೂ ಸಾರ್ವಜನಿಕರ ಗೊಂದಲ ಇನ್ನೂ ದೂರವಾಗಿಲ್ಲ. ಆಧಾರ್ ಕಾರ್ಡಿಗಾಗಿ ಜನ ಪರದಾಡುತ್ತಿದ್ದಾರೆ. ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಾಡುವ ಏಜೆನ್ಸಿಗಳು ಗ್ರಾಹಕರಿಂದ ಆಧಾರ್ ಕಾರ್ಡು ನೋಂದಣಿ ಸಂಖ್ಯೆಯನ್ನು ಕೇಳುತ್ತಿದೆ. ಮುಂದೆ ಸಿಲಿಂಡರ್ಗೆ ಸರ್ಕಾರ ನೀಡಲಿರುವ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರಿಗೆ ಮುಟ್ಟಿಸುವ ವ್ಯವಸ್ಥೆ ಹೊಸದಾಗಿ ಜಾರಿಗೆ ಬರುತ್ತಿರುವುದರಿಂದ ಕಡ್ಡಾಯವಾಗಿ ಆಧಾರ್ ಕಾರ್ಡು ತನ್ನಿ ಎಂದು ತಿಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಯದಿಂದ ಗ್ರಾಹಕರು ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಪೈಪೋಟಿಯಲ್ಲಿದ್ದಾರೆ.
ಈಗಾಗಲೇ ಅಡುಗೆ ಅನಿಲ ಸಿಲಿಂಡರ್ಗೆ ನೇರ ನಗದು (ಸಬ್ಸಿಡಿ ಹಣ) ವರ್ಗಾವಣೆಯ ವ್ಯವಸ್ಥೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಂದ ಆಧಾರ್ ಕಾರ್ಡು ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚುರುಕಿನಿಂದ ಪ್ರಾರಂಭವಾಗಿದೆ.ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದಾದ್ಯಂತ ಕೈಗೊಳ್ಳುತ್ತಿರುವ 6 ನೇ ಹಂತದಲ್ಲಿ ಗ್ರಾಹಕರಿಂದ ಆಧಾರ್ ಸಂಖ್ಯೆ ಪಡೆಯುವ ಪ್ರಕ್ರಿಯೆ ನಡೆಸಲು ಆಯ್ಕೆ ಮಾಡಿರುವ 291 ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ಒಂದಾಗಿದೆ. ರಾಜ್ಯದ ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ,ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ಮಂಡ್ಯ, ಕೋಲಾರ, ರಾಮನಗರ, ಚಾಮರಾಜನಗರ, ಗುಲ್ಬರ್ಗಾ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ 6 ನೇ ಹಂತದಲ್ಲಿ ಸೇರಿವೆ.
ಈ ಹಿಂದೆ ಸರ್ಕಾರದಿಂದ ಅನುಮತಿಯನ್ನು ಪಡೆದಿದ್ದ ಖಾಸಗೀ ಸಂಸ್ಥೆಗಳು ಆಧಾರ್ ಕಾರ್ಡು ವಿತರಿಸಲು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು ಅಂಚೆ ಕಚೇರಿಗಳು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಚುರುಕಾಗಿ ಕೈಗೊಂಡಿದ್ದು ಇದಕ್ಕೆ ಪೂರಕವಾಗಿ ಬಹಳಷ್ಟು ಮಂದಿ ಅಗತ್ಯವಿರುವ ದಾಖಲೆಗಳೊಂದಿಗೆ ತಮ್ಮ ಕುಟುಂಬ ಸಮೇತ ತೆರಳಿ ಆಧಾರ್ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಲು ಮುಂದಾಗಿದ್ದರು. ತಿಂಗಳುಗಟ್ಟಲೇ ಈ ಪ್ರಕ್ರಿಯೆ ನಡೆದರೂ ಆಗಮಿಸುತ್ತಿದ್ದ ಸಾರ್ವಜನಿಕರ ಸಂಖ್ಯೆಗೆ ಹೋಲಿಸಿದರೆ ಸಮಯ ಸಾಕಾಗಲಿಲ್ಲ. ಈ ನಡುವೆ ಆಧಾರ್ ಕಾರ್ಡು ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ಈ ವಿಷಯದಲ್ಲಿ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಆಧಾರ್ಗೆ ಮಾನ್ಯತೆ ನೀಡದ ಹಿನ್ನೆಲೆಯಲ್ಲಿ ತಣ್ಣಗಾಗಿತ್ತು.
ಅರ್ಧಂಬರ್ಧ ಕೆಲಸ: ಆಧಾರ್ ಕಾರ್ಡಿಗೆ ಅನೇಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದರೂ ಹಲವರಿಗೆ ಗುರುತಿನ ಸಂಖ್ಯೆ ಸಿಕ್ಕಿಲ್ಲ. ಗಣಕಯಂತ್ರದಲ್ಲಿ ವಿವರ ಕೇಳಿದ ಸಂದರ್ಭದಲ್ಲಿ ಬಹಳಷ್ಟು ಮಂದಿಗೆ ಗುರುತಿನ ಸಂಖ್ಯೆಯನ್ನು ನೀಡುವ ಪ್ರಕ್ರಿಯೆ ಪೂರ್ಣವಾಗುವ ಹಂತದಲ್ಲಿದೆ ಎಂಬ ಮಾಹಿತಿ ಲಭಿಸುತ್ತಿದೆ. ಜೊತೆಗೆ ಸಾರ್ವಜನಿಕರು ನೀಡಿದ ಸಂಬಂಧಪಟ್ಟ ಮನೆಯ ವಿಳಾಸಕ್ಕೆ ಗುರುತಿನ ಚೀಟಿ ಬರುತ್ತದೆ ಎಂದು ಹೇಳಲಾಗಿದ್ದರೂ ಇನ್ನೂ ಹಲವರಿಗೆ ತಲುಪಿಲ್ಲ. ಮತ್ತೊಂದೆಡೆ ಇನ್ನೂ ಅನೇಕ ಮಂದಿ ಆಧಾರ್ ಕಾರ್ಡ್ ಪಡೆದುಕೊಳ್ಳುವುದನ್ನು ನಿರ್ಲಕ್ಷಿಸಿಕೊಂಡು ಬಂದಿದ್ದು ನೋಂದಣಿಗೆ ಮುಂದಾಗಿರಲಿಲ್ಲ. ಇದರ ನಡುವೆ ಚಿಕ್ಕಬಳ್ಳಾಪುರದಲ್ಲಿ ಪ್ರಸ್ತುತ ಎಲ್ಲಿಯೂ ಅಧಿಕೃತವಾಗಿ ಆಧಾರ್ ಕಾರ್ಡ್ಗಾಗಿ ಮಾಹಿತಿ ಸಂಗ್ರಹಿಸುವ ಕೆಲಸವಾಗುತ್ತಿಲ್ಲ. ಕೆಲ ಸೈಬರ್ ಸೆಂಟರ್ಗಳು ಆನ್ ಲೈನ್ ಮೂಲಕ ಅಸಮರ್ಪಕವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರಲ್ಲದೇ ಪ್ರಮುಖವಾಗಿ ಆಧಾರ್ ಕಾರ್ಡು ಉಚಿತವಾಗಿ ಪಡೆಯಬಹುದೆಂಬ ನಿಯಮವೇ ಉಲ್ಪಾ ಪಲ್ಟಾ ಆಗಿದೆ. ಆಧಾರ್ ಕಾರ್ಡನ್ನು ಮುದ್ರಿಸಿ ಕೊಡಲು 20 ರು.ಗಳಿಂದ 40 ರು.ಗಳವರೆಗೂ ಪಡೆದುಕೊಳ್ಳಲಾಗುತ್ತಿದೆ.
ನಕಲಿ ಚೀಟಿ ಆರ್ಭಟ: ಅಡುಗೆ ಅನಿಲದ ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಆಧಾರ್ ಕಾರ್ಡ್ ನೀಡಬೇಕೆಂದು ಕೇಳಿರುವುದು ಬೇಡಿಕೆಯನ್ನು ಹೆಚ್ಚಿಸಿದ್ದು ಇದನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಕೆಲವರು ನಕಲಿ ಚೀಟಿಗಳನ್ನು ಅಮಾಯಕ ಜನರಿಗೆ ತಯಾರಿಸಿಕೊಟ್ಟು ವಂಚನೆ ಮಾಡುತ್ತಿದ್ದಾರೆ. ವಿತರಣೆಯ ಅವಧಿಯ ಮೇಲೆ ಹಣವನ್ನು ಆಧಾರ್ಗಾಗಿ ಪೀಕಲಾಗುತ್ತಿದೆ. ಎರಡೇ ದಿನಕ್ಕೆ 150 ರು. ಒಂದೇ ದಿನ 300 ರು. ಒಂದು ವಾರಕ್ಕೆ ಕೊಡಲು 100 ರು. ಫಿಕ್ಸ್ ಮಾಡಿದ್ದು, ನಗರದ ಹೃದಯ ಭಾಗವಾದ ಬಲಮುರಿ ಗಣಪತಿ ವೃತ್ತದಲ್ಲಿಯ ಅಂಗಡಿಯೊಂದರಲ್ಲಿ ದಂಧೆ ಕಳೆದೊಂದು ವಾರದಿಂದ ನಡೆಯುತ್ತಿದ್ದರೂ ಸಂಬಂಧಪಟ್ಟವರು ಜಾಣ ಕುರುಡರಾಗಿದ್ದು, ಪತ್ರಕರ್ತರು ನೀಡಿದ ದೂರಿನಂತೆ ಸೋಮವಾರ ಅಕ್ರಮವಾಗಿ ನಡೆಯುತ್ತಿದ್ದ ಕೇಂದ್ರದ ಮೇಲೆ ದಾಳಿ ಮಾಡಿ, ಕಂಪ್ಯೂಟರ್, ಪ್ರಿಂಟರ್ ಉಪಕರಣಗಳನ್ನು ವಶಪಡಿಸಿಕೊಂಡು ಆರೋಪಿ ಆನಂದ್ ಎಂಬಾತನನ್ನು ಬಂಧಿಸಿದ್ದಾರೆ. ಕಾಸು ಕೊಟ್ಟ ಸಹಸ್ರಾರು ಮಂದಿ ತಮ್ಮ ಕೈಯಲ್ಲಿರುವ ಆಧಾರ್ ನಕಲಿ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.