ಜಮೀನು ಕಬಳಿಕೆ ಯತ್ನ: ಶಾಸಕಿ ರಾಮಕ್ಕ ವಿರುದ್ಧ ದೂರು
ಕೆಜಿಎಫ್: ಕಮ್ಮಸಂದ್ರ ಉರಿಗಾಂಪೇಟೆ ರಸ್ತೆ ಕಾಮಗಾರಿಗೆ ಶಾಸಕಿ ವೈ. ರಾಮಕ್ಕ ಹಾಗೂ ಮಾಜಿ ಶಾಸಕ ಸಂಪಂಗಿ ಕೃಷಿ ಜಮೀನಿನನ್ನು ಕಬಳಿಸಲು ಯತ್ನಿಸುತ್ತಿರುವುದಾಗಿ ಯರ್ರನಾಗನಹಳ್ಳಿ ಗ್ರಾಮಸ್ಥರು ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಮ್ಮಸಂದ್ರ ಮತ್ತು ಉರಿಗಾಂಪೇಟೆಗೆ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೊಳಿಸಬೇಕು ಎಂದು ಆ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 60 ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ಕಳೆದ ಬಿಜೆಪಿ ಸರ್ಕಾರದಲ್ಲಿ ಈ ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿತ್ತು. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಕೆಲ ಜಮೀನುಗಳು ಒತ್ತುವರಿಯಾಗುವ ಕಾರಣ ಈ ರಸ್ತೆಗೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದ ಸ್ಥಳಕ್ಕೆ ಶಾಸಕಿ ವೈ.ರಾಮಕ್ಕ ಮತ್ತು ಮಾಜಿ ಶಾಸಕ ವೈ. ಸಂಪಂಗಿ ಭೇಟಿ ನೀಡಿ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸದಂತೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯರ್ರನಾಗನಹಳ್ಳಿ ಕೆಲ ಗ್ರಾಮಸ್ಥರು ತಮ್ಮ ಕೃಷಿ ಜಮೀನನ್ನು ರಸ್ತೆ ಕಾಮಗಾರಿ ಮಾಡುವಾಗ ನಾಶಮಾಡುತ್ತಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ.