ವಾಜಪೇಯಿ ದೂರದೃಷ್ಟಿಯುಳ್ಳ ನಾಯಕ
ಕ.ಪ್ರ.ವಾರ್ತೆ ಕೋಲಾರ ಡಿ.25
ನಗರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 90ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಅನೇಕರು ರಕ್ತದಾನ ಮಾಡಿದರು, ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ನಿರತರಾಗಿರುವ ಕೆಲವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಜಪೇಯಿ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಸ್ಮರಿಸಿಕೊಂಡರು.
23 ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿಕೊಂಡು ಉತ್ತಮ ಆಡಳಿತವನ್ನು ನೀಡಿ ಇಡೀ ವಿಶ್ವಕ್ಕೆ ಮಾದರಿ ಆಗಿದ್ದಾರೆ. ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಪಾಕಿಸ್ತಾನ ವಾಜಪೇಯಿ ಕಾಲದಲ್ಲಿ ಭಾರತದ ತಂಟೆಗೆ ಬರಲು ಎದುರುತ್ತಿತ್ತು ಎಂದು ತಿಳಿಸಿದರು. ವಾಜಪೇಯಿ ರೀತಿಯಲ್ಲಿ ನರೇಂದ್ರ ಮೋದಿ ಆಡಳಿತ ನಡೆಸಲು ಈ ಬಾರಿ ಜನತೆ ಬಿಜೆಪಿಗೆ ಮತ ಹಾಕಬೇಕು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿದಾಗ ಮಾತ್ರ ಸಾಧ್ಯವೆಂದರು.
ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶ್ರೀರಾಮಲು ಮಾತನಾಡಿ, ವಾಜಪೇಯಿರವರ ಜನ್ಮ ದಿನಾಚರಣೆಯನ್ನು ಜೀವ ಉಳಿಸುವ ರಕ್ತವನ್ನು ದಾನ ನೀಡುವ ಮೂಲಕ ಅಚರಣೆ ಮಾಡುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿಯ ಹಿರಿಯ ಕಾರ್ಯಕರ್ತ ನಂಜುಂಡಯ್ಯ ಶೆಟ್ಟಿ, ಮುರಳೀಧರ ಶರ್ಮ, ಹೊದಲವಾಡಿ ವೆಂಕಟೇಶಪ್ಪ, ಅಬ್ಬಣಿ ವೆಂಕಟೇಶಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿಯ ಕೋಲಾರ ನಗರ ಘಟಕದ ಅಧ್ಯಕ್ಷ ಜಯಂತಿಲಾಲ್ ಜೈನ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೋಲಾರ ನಗರ ಕಾಂಗ್ರೆಸ್ ಮುಖಂಡ ಮುಜೀಜ್ ಬೇಗ್ ಮತ್ತು ಏಜಾಜ್ ಬಿಜೆಪಿ ಸೇರಿದರು. ನಗರ ಉಪಾಧ್ಯಕ್ಷರ ಶಂಕರ್, ರಾಷ್ಟ್ರೀಯ ಎಸ್.ಸಿ. ಮೋರ್ಚಾ ಕಾರ್ಯಕಾರಣಿ ಸದಸ್ಯ ವೆಂಕಟೇಶ್ ಮೌರ್ಯ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ ನೀಲಿ ಜಯಶಂಕರ್, ಮಹಿಳಾ ಮೋರ್ಚಾದ ಮಮತಾ ಇನ್ನಿತರರು ಇದ್ದರು.
ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಓಹೀಲೇಶ್ ನಿರೂಪಿಸಿ ,ಗ್ರಾಮಾಂತರ ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ ವಂದಿಸಿದರು.
ಬಾಗೇಪಲ್ಲಿಯಲ್ಲಿ ಆಚರಣೆ
ಬಾಗೇಪಲ್ಲಿ: ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಭಾವಚಿತ್ರ ಇಟ್ಟು ಕೇಕ್ ಕತ್ತರಿಸುವ ಮೂಲಕ ಮಾಜಿ ಪ್ರಧಾನಿ ವಾಜಪೇಯಿ 89 ನೇ ಜನ್ಮ ದಿನವನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಜಿಲ್ಲಾಛ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಚೌಡರೆಡ್ಡಿ, ಮಾಜಿ ಪ್ರಧಾನ ಮಂತ್ರಿ ವಾಜಪೇಯಿರವರು ಪ್ರಧಾನಿ ಮಂತ್ರಿಯಾಗಿದ್ದಾಗ ದೇಶದ ಅಭಿವೃದ್ಧಿಗೆ ಅಪಾರ ಕಾಣಿಕೆ ನೀಡಿದ್ದಾರೆ. ಈ ದೇಶ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಅಟಲ್‌ಜೀ ಮೊದಲಿಗರು ಎಂದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಅಟಲ್‌ಜಿ ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಾಜಪೇಯಿ ಅವರ 89 ನೇ ಹುಟ್ಟು ಹಬ್ಬವನ್ನು ತಾಲೂಕು ಕಚೇರಿ ಆವರಣದಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಗೂಳೂರು ಲಕ್ಷ್ಮೀನಾರಾಯಣ, ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ವೆಂಕಟೇಶ್, ಡಾ. ಆದಿಲಕ್ಷ್ಮಮ್ಮ, ಮಂಜುಳಬಾಯಿ, ಸುಜಾತಮ್ಮ, ಮಂಜುಳ, ಬಾಬಾಜಾನ್, ಕರಾಟೆ ರಿಯಾಜ್, ಸನಾವುಲ್ಲಾ, ಬಾಬಾ ಫಕೃದ್ದೀನ್ ಮುಂತಾದವರು ಇದ್ದರು.
ಬಡ ರೋಗಿಗಳಿಗೆ ಹಣ್ಣು, ಹಂಪಲು: ನರೇಂದ್ರಮೋದಿ ಸೇನೆ ಮುಖಂಡ ನಂಜುಂಡರಾವ್ ನೇತೃತ್ವದಲ್ಲಿ ಮುಖಂಡರು ವಾಜಪೇಯಿ ಹುಟ್ಟು ಹಬ್ಬದ ಪ್ರಯಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು, ಹಂಪಲು ಹಂಚಿದರು. ಬಿ.ಜೆ.ಪಿ.ಮುಖಂಡರಾದ ಶಿವಪ್ಪ. ಟಿ. ರಾಮಪ್ಪ. ಚಂದ್ರಶೇಖರರೆಡ್ಡಿ ಮುಂತಾದವರು ಇದ್ದರು.
ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಬಿಜೆಪಿ ಮುಖಂಡರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮತ್ತು ಶ್ರೀ ಪಂಚಮುಖಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಕೈಗೊಂಡು, ಮಾಜಿ ಪ್ರಧಾನಿ ವಾಜಪೇಯಿರವರ ಆರೋಗ್ಯ ಕಾಪಾಡಬೇಕೆಂದು ಪ್ರಾರ್ಥಿಸಿದರು. ಇದರ ಜೊತೆಗೆ ನಗರದ ವಿವಿಧೆಡೆ ಹೋಮ, ಪೂಜೆ ಹಾಗೂ ದೇಶ ಭಕ್ತಿ ಗೀತೆ ಗಾಯನ ಕಾರ್ಯಕ್ರಮವನ್ನು ಕೈಗೊಂಡರು. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ವಾಜಪೇಯಿ ಪ್ರಧಾನಿಯಾಗಿ ನೀಡಿದ ಕೊಡುಗೆಗಳು ಅಪಾರವಾದುದು. ಇಡೀ ವಿಶ್ವವನ್ನೇ ಭಾರತದ ಕಡೆಗೆ ಗಮನ ಸೆಳೆಯುವಂತೆ ಮಾಡಿದರು. ವಾಜಪೇಯಿರವರ ಮಾರ್ಗದರ್ಶನ, ಸಂದೇಶವು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ
ಮುಳಬಾಗಲು: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿರವರ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೇಡ್ ಮತ್ತು ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ವಾಜಪೇಯಿಯವರು ದೇಶ ಕಂಡ ಅಪರೂಪದ ರಾಜಕಾರಣೆಯಾಗಿದ್ದು, ಅವರ ಆದರ್ಶಗಳು ಇಂದಿನ ರಾಜಕಾರಣೆಗಳಿಗೆ ಅನುಕರಣೀಯವಾಗಿದೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಅತ್ತಿಪಲ್ಲಿ ವೆಂಕಟರವಣ, ಸಿ.ಕೆ. ರಾಧವಲ್ಲಭಗೌಡ, ಹರೀಶ್, ಕೋಳಿವಾಗರಾಜ್, ಅರುಣಾ ನಾಗೇಶ್, ನಾಗೇಶ್ ಬಾಬು ಚಲಪತಿ ಮುಂತಾದವರು ಭಾಗವಹಿಸಿದ್ದರು.