ಸವಲತ್ತು ಬಳಸಿಕೊಂಡು ಮುಖ್ಯವಾಹಿನಿಗೆ ಬನ್ನಿ
ಗೌರಿಬಿದನೂರು: ವಿಕಲಚೇತನರು ಸರ್ಕಾರದ ಹಾಗೂ ಸ್ವಯಂಸೇವಾ ಸಂಸ್ಥೆಗಳು ನೀಡುವಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಸಾಮಾನ್ಯರಂತೆ ನೀವು ಸಹ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ಮಂಚೇನಹಳ್ಳಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ವಿಕಲಚೇತನ ಸಂಘಟನೆಯ 2ನೇ ವಾರ್ಷಿಕೋತ್ಸವ ಮತ್ತು ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆವಿಎಸ್ ಸಂಘಟನೆ ವಿಕಲಚೇತನರ ಕೈ ಹಿಡಿಯಲು ಸ್ವಯಂ ಪ್ರೇರಿತವಾಗಿ ಸೇವೆ ಮಾಡುತ್ತಿರುವ ಸಂಸ್ಥೆ ಸೇವೆ ಶ್ಲಾಘನೀಯ ಎಂದರು.
ಅನುದಾನ ಭರವಸೆ: ಅಂಗವಿಕಲರ ಕ್ರೀಡಾಕೂಟ ಏರ್ಪಡಿಸುವ ಮೂಲಕ ಅವರಲ್ಲಿ ಹೊಸ ಚೈತನ್ಯ ತುಂಬುವುದರೊಂದಿಗೆ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ನೆರವು ಕೊಡಿಸಲು ದುಡಿಯುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಅನುದಾನದಲ್ಲಿ ಅವರಿಗೆ ಬೇಕಾದ ಉಪಕರಣಗಳನ್ನು ಕೊಳ್ಳಲು 5 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಹನುಮಪ್ಪರೆಡ್ಡಿ ಮಾತನಾಡಿ, ಹಳ್ಳಿಗಾಡಿನಲ್ಲಿ ನೆಲಸಿರುವ ವಿಕಲಚೇತನರಿಗೂ ಸರ್ಕಾರದ ಸೌಲಭ್ಯಗಳು ದೊರೆಯಲು ಅರಿವು ಅತ್ಯಗತ್ಯ. ಅಂಗವಿಕಲರು ವಿಶಿಷ್ಠ ಸಾಧನೆ ಕೈ ಕಸುಬು, ಕಲಿಯಲು ವಿಶೇಷ ತರಬೇತಿಗಳನ್ನು ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ತರಲು ಶ್ರಮಿಸಿ ಎಂದು ತಿಳಿಸಿದರು.
ಸಮಾರಂಭದಲ್ಲಿ ದಂಡಿಗಾನಹಳ್ಳಿ ಡ್ಯಾಂ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ ಕೆ.ವಿ. ಹನುಮಪ್ಪರೆಡ್ಡಿ ಸ್ಥಳೀಯ ಜನರಿಗೆ, ರೈತರ ಸಾಮೂಹಿಕ ಸಭೆ ಸೇರಿಸಿ ಸಾಧಕ ಬಾಧಕಗಳನ್ನು ತಿಳಿದು ಯೋಜನೆ ಬಗ್ಗೆ ಚರ್ಚೆ ನಂತರ ತೀರ್ಮಾನ ಕೈಗೊಳ್ಳಬೇಕೆಂದು ಉಪಸಭಾಪತಿಗಳಿಗೆ ಮನವಿ ಮಾಡಿದರು.