ಸುದ್ದಿ ಸಂಕ್ಷೇಪ
ವಿಷ ಸೇವಿಸಿ ರೈತ ಆತ್ಮಹತ್ಯೆ
ಮುಳಬಾಗಲು: ತಾಲೂಕಿನ ಮದ್ದೇರಿ ಗ್ರಾಮದ ನೆಂಟರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ಚಿಕ್ಕಬಳ್ಳಾಪುರ ಜಿಲ್ಲೆಯ ಎ. ಗುಟ್ಟಹಳ್ಳಿ ಗ್ರಾಮದ ವಾಸಿ ಶ್ರೀನಿವಾಸಮೂರ್ತಿ (50) ಎಂದು ಗುರ್ತಿಸಲಾಗಿದ್ದು, ಕೃಷಿ ಹಾಗೂ ಇತರೆ ಸಾಲ ವಾಪಸ್ ನೀಡಲಾಗದೆ ನೆಂಟರ ಮನೆಗೆ ಬಂದಿದ್ದಾಗ ಅವರ ಹೊಲದ ಬಳಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಮೃತರು ಗ್ರಾಮದ ಸಂಬಂಧಿ ನಾರಾಯಣಪ್ಪ ಎಂಬುವರ ಮನೆಗೆ ಬಂದಿದ್ದರು. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಂಬಿಹಳ್ಳಿಯಲ್ಲಿ ಮಹಾ ಸಮಾರಾಧನೆ
ಕೋಲಾರ: ತಾಲೂಕಿನ ತಂಬಿಹಳ್ಳಿಯ ಶ್ರೀ ಮಾಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಕ್ಕೆ ಸೇರಿದ ಶ್ರೀ ಮಾಧವತೀರ್ಥರ ಮಠದಲ್ಲಿ ಶ್ರೀ 108 ಪ್ರಸನ್ನಶೂರ ಮಾಧವ ತೀರ್ಥರ ಮೂರನೆಯ ಮಹಾ ಸಮಾರಾಧನೆಯನ್ನು ಇದೇ ಡಿ. 27ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಗಳಾದ ಶ್ರೀ 108 ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ತಿಳಿಸಿದ್ದಾರೆ.
12ಕ್ಕೆ ರಘುನಾಥರಿಗೆ ಕವಿ ನಮನ
ಕೋಲಾರ: ಏಳು ವರ್ಷಗಳ ನಂತರ ಮನ್ವಂತರ ಪ್ರಕಾಶನದ ಸಾಹಿತ್ಯ, ಸಾಂಸ್ಕೃತಿಕ ವಿಭಾಗದಿಂದ ಕವಿ ನಮನ ಕಾರ್ಯಕ್ರಮವನ್ನು ಜನವರಿ 12ರಂದು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬುಧವಾರ ಪತ್ರಕರ್ತರ ಭವನದಲ್ಲಿ ಮನ್ವಂತರ ಪ್ರಕಾಶನದ ಹಿರಿಯ ಉಪಾಧ್ಯಕ್ಷ ಟಿ.ಕೆ. ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಸ.ರಘುನಾಥ ಅವರಿಗೆ ಕವಿ ನಮನ ಸಮರ್ಪಣೆ ಮಾಡಲು ತೀರ್ಮಾನಿಸಲಾಯಿತು. ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಂಪಿ ವಿವಿಯ ಪ್ರೊ. ಶಿವಾರೆಡ್ಡಿ, ಗಡಿನಾಡು ಹೋರಾಟಗಾರ ನಂದ್ಯಾಲ ನಾರಾಯಣರೆಡ್ಡಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ಉದ್ಘಾಟಿಸಲಿದ್ದು, ವಿವಿಧ ಉಪ ಸಮಿತಿಗಳ ರಚನೆ ಮಾಡಿ, ಕವಿಗೋಷ್ಠಿಗೆ ಪ್ರತಿಭಾವಂತ ಕವಿಗಳನ್ನು ಆಯ್ಕೆ ಮಾಡುವುದಕ್ಕೆ ಜೆ.ಜಿ. ನಾಗರಾಜ್,ಪುರುಷೋತ್ತಮ್, ಮಾಲೂರು ಅಶ್ವತ್ಥರೆಡ್ಡಿ ಹಾಗೂ ಜಿ. ಶ್ರೀನಿವಾಸ್ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಯಿತು.