ಹಿರಿಯ ನಾಗರಿಕರನ್ನು ಸತಾಯಿಸದೇ ಸಕಾಲದಲ್ಲೆ ಸವಲತ್ತು ಒದಗಿಸಿ: ಸಲಹೆ
ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರಿಗೆ ಸತಾಯಿಸದೇ ಸಕಾಲದಲ್ಲಿ ಸವಲತ್ತುಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಹಿರಿಯ ನಾಗರಿಕರ ವೇದಿಕೆಯ ಆಧ್ಯಕ್ಷ ಎನ್. ರಾಮಕೃಷ್ಣಪ್ಪ ಒತ್ತಾಯಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಿರಿಯ ನಾಗರೀಕರು ಸಮಾಜಕ್ಕೆ ಮಾರ್ಗದರ್ಶಕರಾಗಿ ಒತ್ತಡದಿಂದ ಮುಕ್ತ ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ವಯಸ್ಸು 50 ದಾಟುತ್ತಿದ್ದಂತೆ ಅನಾರೋಗ್ಯ ಸಮಸ್ಯೆಯೂ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೇ ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಹಿರಿಯ ನಾಗರಿಕರ ವೇದಿಕೆಯಿಂದ ಸಮಸ್ಯೆಗಳನ್ನು ತಿಳಿದುಕೊಂಡು ಸ್ಪಂದಿಸುವಂತಹ ಕಾರ್ಯವನ್ನು ಮಾಡುತ್ತಿದ್ದು ಮೂರು ತಿಂಗಳಿಗೆ ಒಮ್ಮೆ ಹಿರಿಯ ನಾಗರಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುವುದು.ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅರ್ಹರಿಗೆ ಸಕಾಲದಲ್ಲಿ ಸವಲತ್ತುಗಳು ಸಿಗುವಂತಾಗಲು ಶ್ರಮಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ನಗರದ ನಂದಿ ರಂಗಮಂದಿರದ ಆವರಣದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ನಾಗರಿಕರಾದ ನರಸಪ್ಪ, ನಾರಾಯಣಸ್ವಾಮಿ, ಮುನಿಸ್ವಾಮಯ್ಯರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಮುಖಂಡರಾದ ಚಿಕ್ಕರಾಮಯ್ಯ,ಡಾ. ರಾಮಚಂದ್ರ, ವಿ. ಶಂಕರ್, ಸೂರ್ಯನಾರಾಯಣರಾವ್, ಸರಸ್ವತಿ ಮೋಹನ್ ಉಪಸ್ಥಿತರಿದ್ದರು.