'ಅನಾಥ ಮಕ್ಕಳ ಆರೈಕೆಗೆ ಮುಂದಾಗಿ'
ಚಿಕ್ಕಬಳ್ಳಾಪುರ: ಅನಾಥ ಮಕ್ಕಳ ಆರೈಕೆಗಾಗಿ ಸಮುದಾಯದ ಸ್ವಯಂಸೇವಾ ಸಂಸ್ಥೆಗಳು ಸಕ್ರಿಯವಾಗಿ ಸೇವಾ ಕಾರ್ಯಗಳಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳಬೇಕೆಂದು ಖ್ಯಾತ ವಕೀಲ ಸುಧಾಕರ್ ಹೇಳಿದರು.
ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿರುವ ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಹೈನಾ ಟ್ರಸ್ಟ್ಏರ್ಪಡಿಸಿದ್ದ ಮಕ್ಕಳ ಹಾರೈಕೆ ಹಾಗೂ ಪುಸ್ತಕ ಪರಿಕರಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ಎಷ್ಟೋ ಮಕ್ಕಳು ತುತ್ತು ಅನ್ನವಿಲ್ಲದೇ ಅಲೆದಾಡುವ ಪರಿಸ್ಥಿತಿ ಇದೆ, ಕೆಲ ಪೋಷಕರು ಮಕ್ಕಳ ಯೋಗ ಕ್ಷೇಮ ನೋಡದೇ ಬೀದಿಗೆ ಅಟ್ಟುತ್ತಿರುವ ಘಟನೆಗಳು ಅಲ್ಲಲ್ಲಿ ಕಾಣಸಿಗುತ್ತಿವೆ, ಇಂತಹ ಮಕ್ಕಳ ಆರೈಕೆಗೆ ಹೈನಾ ಟ್ರಸ್ಟ್ ಶ್ರಮಿಸುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿಭೃದ್ಧಿ ಯೋಜನಾಧಿಕಾರಿ ರಾಮರಾಜ್ ಅರಸ್ ಮಾತನಾಡಿ, ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರ ವಿದ್ಯಾಭ್ಯಾಸ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಳೆದ 7-8 ವರ್ಷಗಳಿಂದ ಶಿಡ್ಲಘಟ್ಟ ತಾಲೂಕಿನಲ್ಲಿ ಟಸ್ಟ್ ವತಿಯಿಂದ ಸಾಮೂಹಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಇದು ಜಿಲ್ಲೆಯಾದ್ಯಂತ ಆಚರಿಸುವ ಮೂಲಕ ಇಂತಹ ಅನಾಥ ಮಕ್ಕಳ ಬದುಕು ಹಸನು ಮಾಡಲು ಸಾಧ್ಯವಾಗಲಿದೆ. ಅದರಂತೆ ಟ್ರಸ್ಟ್ ವತಿಯಿಂದ ಬಾಲ್ಯಾವಸ್ಥೆಯಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸಿ ರೇಷ್ಮೆ ಕೆಲಸದಲ್ಲಿ ತೊಡಗಿದ್ದ ಸುಮಾರು 412 ಬಾಲಕಾರ್ಮಿಕರನ್ನು ವಸತಿ ಶಾಲೆಗೆ ಸೇರಿಸಿ ತಾಯಿ-ತಂದೆ ಇಲ್ಲದ ಅನಾಥ ಮಕ್ಕಳಿಗೆ ಉಚಿತವಾಗಿ ಊಟ, ಬಟ್ಟೆ, ಪುಸ್ತಕ, ನೀಡಲಾಗುತ್ತಿದೆ ಎಂದರು.
ಹೈನಾ ಟ್ರಸ್ಟ್ ಅಧ್ಯಕ್ಷ ಮೇರಾಚೆಲ್ಲಾದೊರೈ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೈನಾ ಟ್ರಸ್ಟ್ ನಿರ್ದೇಶಕರಾದ ಉಷಾ, ಜಯಶ್ರೀ, ಮಂಜುಳ, ಪುರಸಭಾ ಸದಸ್ಯ ಜಬೀನಾ ತಾಜ್, ಅರುಣ್ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.