ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ; ಬಂಧನ
ಚಿಕ್ಕಬಳ್ಳಾಪುರ: ಬಡ ಜನರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆಯ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ, ಅನ್ನಭಾಗ್ಯ ಯೋಜನೆಯ ಮೂರು ಅಕ್ಕಿ ಮೂಟೆಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಆಂಧ್ರದ ಹಿಂದೂಪುರದ ವ್ಯಕ್ತಿ ಚಲಪತಿ ಎಂದು ಗುರುತಿಸಲಾಗಿದೆ. ಅನುಮಾನಾಸ್ಪದವಾಗಿ ಮೂರು ಅಕ್ಕಿ ಮೂಟೆಗಳನ್ನು ಸಾಗಿಸುತ್ತಿದ್ದನ್ನು ಕಂಡು ತಿಳಿಸಿದ ಹಿನ್ನೆಲೆಯಲ್ಲಿ ಸಮೀಪದಲ್ಲಿಯೇ ಇದ್ದ ಪೊಲೀಸರು ಆಗಮಿಸಿ ಆರೋಪಿಯನ್ನು ಮಾಲು ಸಮೇತ ವಶಪಡಿಸಿಕೊಂಡಿದ್ದು, ಇದೀಗ ತನಿಖೆ ಕೈಗೊಂಡಿದ್ದಾರೆ.
ಆರೋಪಿ ನಗರದ ಗರ್ಲ್ಸ್ ಸ್ಕೂಲ್ ರೋಡ್ನಲ್ಲಿರುವ ನ್ಯಾಯಬೆಲೆ ಅಂಗಡಿಗಳಿಂದ 50 ಕೆ.ಜೆ.ತೂಕದ ಮೂಟೆಗೆ ತಲಾ 700 ರು.ಗಳನ್ನು ಕೊಟ್ಟು ಖರೀದಿಸಿದ್ದ. ರಮೇಶ್ ಕುಮಾರ್ ಮತ್ತು ಶಿವಕುಮಾರ್ ತನಗೆ ಮಾರಾಟ ಮಾಡಿದರು ಎಂದು ಆರೋಪಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನಾ ಅನ್ನಭಾಗ್ಯ ಯೋಜನೆಯ ಅಕ್ಕಿ ಮೂಟೆಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದನ್ನು ಕಂಡು ಅದರ ಬಗ್ಗೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆರೋಪಿ ಪತ್ರಕರ್ತರಿಗೆ ತಲಾ 500 ಗರಿ ಗರಿ ನೋಟುಗಳನ್ನು ಕೊಡಲು ಮುಂದಾಗಿದ್ದ. ಪೊಲೀಸರಿಗೆ ವಿಷಯ ತಿಳಿಸದೇ ತಮ್ಮನ್ನು ಬಿಟ್ಟು ಬಿಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದ. ಆದರೆ, ಕಾನೂನಿಗೆ ವಿರುದ್ಧ ಅಕ್ಕಿಯನ್ನು ಅಕ್ರಮ ಸಾಗಾಣಿಕೆ ಮಾಡುತ್ತಿರುವುದನ್ನು, ಅದನ್ನು ಮುಚ್ಚಿ ಹಾಕಲು ಹಣದ ಆಮಿಷವನ್ನು ಒಡ್ಡುವುದನ್ನು ಖಂಡಿಸಿ ಪೊಲೀಸರಿಗೆ ವಿಷಯ ತಿಳಿಸಲಾಯಿತು.ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಸಾಗಾಣಿಕೆ: ರಾಜ್ಯ ಸರ್ಕಾರ ಬಡ ಜನರು ಹಸಿವಿನಿಂದ ಸಾಯಬಾರದು. ಮೂರು ಹೊತ್ತು ಊಟವನ್ನು ಮಾಡಬೇಕೆಂಬ ಸದುದ್ದೇಶದಿಂದ ಕೇವಲ 1 ರು. ರದಲ್ಲಿ 1 ಕೆ.ಜಿ. ಅಕ್ಕಿಯನ್ನು ಪಡಿತರ ಚೀಟಿಯನ್ನು ಹೊಂದಿರುವವರಿಗೆ ನೀಡುತ್ತಿದೆ. ಇದು ಬಡವರ ಪಾಲಿಗೆ ಆಶಾಕಿರಣವಾಗಿದ್ದರೆ, ಕೆಲ ನ್ಯಾಯ ಬೆಲೆ ಅಂಗಡಿ ಮಾಲೀಕರು ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಪಡಿತರ ಚೀಟಿಯನ್ನು ತಂದು ತಮ್ಮ ಪಾಲಿನ ಪಡಿತರ ಪದಾರ್ಥಗಳನ್ನು ಕೇಳಿದಾಗ ಸುಳ್ಳು ಮಾತುಗಳನ್ನು ಹೇಳಿ ಜನರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೇ ಕಡಿಮೆ ತೂಕದಲ್ಲಿ ಅಕ್ಕಿಯನ್ನು ಉಳಿಸಿಕೊಳ್ಳುವುದು, ನಕಲಿ ಪಡಿತರ ಚೀಟಿಗಳ ಮೂಲಕ ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಿ, ಅಂಗಡಿ ಮಾಲೀಕರುಗಳಿಗೆ ಮಾರಾಟ ಮಾಡುತ್ತಿದ್ದು ಕೆ.ಜಿ.10 ರು. ಪಡೆದು ಅಕ್ಕಿಗೆ ಪಾಲಿಶ್ ಮಾಡಿ ಮತ್ತೆ ಅದನ್ನು 20 ರೂಗಳಿಗೆ ಮಾಲೀಕರು ಮಾರಾಟ ಮಾಡುವ ದಂಧೆ ನಡೆಯುತ್ತಲೇ ಇದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಕೈಗೊಳ್ಳದಿರುವುದೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ.
ಕಟ್ಟುನಿಟ್ಟಿನ ಎಚ್ಚರಿಕೆ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಎಲ್ಲಾದರೂ ಅಕ್ರಮವಾಗಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಕಂಡು ಬಂದರೆ ಜನರು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಇದರಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.