ಆರೋಗ್ಯ ಕೇಂದ್ರದ ಎದುರು ಕಿರಿಕಿರಿ ಮಾಡುತ್ತಿರುವ ವಾಹನ ನಿಲುಗಡೆ
ಟೇಕಲ್: ಮೇಲಿನ ಚಿತ್ರ ನೋಡಿ ತಪ್ಪು ತಿಳಿಯಬೇಡಿ. ಇದು ದ್ವಿಚಕ್ರವಾಹನಗಳ ಸ್ಟ್ಯಾಂಡ್ ಅಲ್ಲ. ಟೇಕಲ್ ಆರೋಗ್ಯ ಕೇಂದ್ರ ಮುಂಭಾಗ! ಈ ಜಾಗದಲ್ಲಿ ದಿನವಹಿ 80ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರೈಲಿನಲ್ಲಿ ಪ್ರಯಾಣಿಸುವ ಕೆಲವರು ದ್ವಿಚಕ್ರ ವಾಹನಗಳನ್ನು ಖಾಸಗಿ ಸ್ಟ್ಯಾಂಡ್ಗೆ ಹಾಕದೆ ಆರೋಗ್ಯ ಕೇಂದ್ರದ ಕೌಂಪೌಂಡ್ ಒಳಗಡೆ ಹಾಕುತ್ತಿದ್ದಾರೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಗಾಡಿಗಳು ತುಂಬಿ ಹೋಗಿದ್ದು ಸಂಜೆ 6 ಗಂಟೆಗೆ ಅದು ಖಾಲಿಯಾಗುತ್ತದೆ. ಇದರಿಂದ ಪ್ರತಿದಿನ ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಬಹಳ ತೊಂದರೆಯಾಗಿದ್ದು ತುರ್ತು ಚಿಕಿತ್ಸೆಗಾಗಿ ಬರುವ 108 ಆಂಬ್ಯುಲೆನ್ಸ್ಗೂ ಆಸ್ಪತ್ರೆಯ ಒಳಬರುವುದಕ್ಕೆ ತೊಂದರೆಯಾಗಿದೆ ಎಂದು ನಿತ್ಯ ಆರೋಗ್ಯ ಕೇಂದ್ರಕ್ಕೆ ಬರುವ ಜನತೆ ಆರೋಪಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಅವರಿಗೆ ತಿಳಿದೂ ತಿಳಿದಿಲ್ಲದಂತೆ ವರ್ತಿಸುತ್ತಿದ್ದಾರೆ. ರೋಗಿಗಳ ಮೇಲಿನ ಕಳಕಳಿಯಿಂದಲಾದರೂ ಈ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.
ಅಪಘಾತ; ವ್ಯಕ್ತಿ ಸಾವು
ಮಾಲೂರು: ಟಿಪ್ಪರ್ ಹಾಗೂ ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಟೇಕಲ್ ರಸ್ತೆಯ ಸೂಣ್ಣಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ. ಮೃತನನ್ನು ವಡಗನಹಳ್ಳಿ ಗ್ರಾಮದ ಸಂತೋಷ್(27)ಎಂದು ಗುರುತಿಸಲಾಗಿದೆ. ಮಾಲೂರಿನಿಂದ ತನ್ನ ಗ್ರಾಮಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ಟೇಕಲ್ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸಂತೋಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಟ್ಟೆ ನೋವು; ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಹೊಟ್ಟೆ ನೋವು ತಾಳಲಾರದೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತೂರು ಗ್ರಾಮದ ನಿವಾಸಿ ಮುತ್ತು ಎಂಬವರ ಮಗ ಶ್ರೀಧರ್(36) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರಿಗೆ ಆಗಾಗ ತೀವ್ರವಾದ ಹೊಟ್ಟೆನೋವು ಬರುತ್ತಿದ್ದು ಚಿಕಿತ್ಸೆ ನೀಡಿದರೂ ಗುಣಮುಖವಾಗಿಲ್ಲ ಎನ್ನಲಾಗಿದೆ. ಬುಧವಾರ ರಾತ್ರಿ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ನೋವು ತಾಳಲಾರದೆ ಜೀವನದಲ್ಲಿ ಬೇಸರಗೊಂಡ ಶ್ರೀಧರ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉರಿಗಾಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಧಿಕೃತ ಪೆಟ್ಟಿಗೆ ಅಂಗಡಿಗಳ ತೆರವು
ಗುಡಿಬಂಡೆ: ಪಟ್ಟಣದ ಸಾರ್ವಜನಿಕ ಆಸ್ಪೆತ್ರೆ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ಪಪಂ ಸಿಬ್ಬಂದಿ ತೆರವುಗೊಳಿಸಿದರು. ಕಾರ್ಯಾಚರಣೆಯಲ್ಲಿ ಪಪಂ 1ನೇ ವಾರ್ಡ್ನ ಸದಸ್ಯ ರಾಜಣ್ಣ, 4ನೇ ವಾರ್ಡ್ ಸದಸ್ಯ ದ್ವಾರಕೀನಾಥನಾಯ್ಡು, ಆರೋಗ್ಯ ನಿರೀಕ್ಷಕ ಶಿವಣ್ಣ ಮತ್ತು ಸಿಬ್ಬಂದಿಯಾದ ಗಂಗಾಧರ, ಪದ್ಮನಾಭ, ವೆಂಕಟೇಶ, ಮುನಿಯಪ್ಪ ಹಾಗೂ ನರಸಪ್ಪ ಇದ್ದರು.
ಶ್ರುತಿಗೆ ಅಭಿನಂದನೆ
ಬಂಗಾರಪೇಟೆ: ಮಹಾವೀರ್ ಜೈನ್ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರುತಿ 15ರಿಂದ 19ರ ವರೆಗೆ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಜಿಲ್ಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.