ಕಳ್ಳರ ಕೈಚಳಕ; ನಾಗರಿಕರ ನಡುಕ
ಕ.ಪ್ರ.ವಾರ್ತೆ ಕೋಲಾರ ಡಿ.26
ನಗರದಲ್ಲಿ ಕಳ್ಳರ ಕೈಚಳಕ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಆತಂಕಪಡುವಂತಾಗಿದೆ. ಸರಗಳ್ಳತನದಿಂದ ರೋಸಿ ಹೋಗಿರುವ ಜನತೆ ಈಗ ತಮ್ಮ ಮಕ್ಕಳ ಸೈಕಲ್, ಮೊಬೈಲ್ ಫೋನ್, ವಾಹನಗಳ ಬ್ಯಾಟರಿಗಳ ಕಳುವಿನಿಂದ ಕಂಗಾಲಾಗಿದ್ದಾರೆ.
ಕೆಲ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲು ಆಗುತ್ತಿಲ್ಲ, ದೂರು ಕೊಟ್ಟ ಪ್ರಕರಣಗಳನ್ನು ಕಂಡು ಹಿಡಿಯಲು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಗೆ ಕಿಮ್ಮತ್ತು ಸಿಗುತ್ತಿಲ್ಲ. ನಗರದಲ್ಲಿ ಸರಗಳ್ಳತನ, ಸೈಕಲ್ ಚಕ್ರಗಳ ಕಳವು ರಾತ್ರಿ ವೇಳೆಯಲ್ಲೇ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ಬೀದಿ ದೀಪಗಳು ಉರಿಯದಿರುವುದು ಹಾಗೂ ಅಸಮರ್ಪಕ ವಿದ್ಯುತ್ ಕಡಿತವೆಂಬುದು ಜನತೆಯ ಆರೋಪ.
ಇಲ್ಲಿನ ಗೌರಿಪೇಟೆ ಹಾಗೂ ಕುರುಬರ ಪೇಟೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ನಗರ ಪೊಲೀಸ್ ಠಾಣೆಗೆ ಸಮೀಪವೇ ಇರುವ ಗೌರಿಪೇಟೆಯಲ್ಲಿ ಇರುವ ಪಾಠದ ಮನೆಗೆ ಬಂದಿದ್ದ ವಿದ್ಯಾರ್ಥಿಗಳನ್ನು ಕದಿಯಲು ವಿಫಲ ಯತ್ನ ನಡೆಸಿರುವ ಕಳ್ಳರು ಕಡೆಗೆ ಸುಮಾರು 5 ಸಾವಿರ ರು. ಬೆಲೆ ಬಾಳುವ ಸೈಕಲ್ನ ಮುಂದಿನ ಚಕ್ರ ಮತ್ತು ಸೀಟನ್ನು ಕಳಚಿಕೊಂಡು ಹೋಗಿದ್ದಾರೆ.
ಕಳ್ಳರ ಕಾಟದಿಂದ ಮುಕ್ತಿ ದೊರಕಿಸಿ ಎಂದು ನಾಗರಿಕರು ಪೊಲೀಸರಲ್ಲಿ ಮೊರೆ ಹೋಗಿದ್ದಾರೆ.
ಅಂಗಡಿ, ಕಚೇರಿಗಳ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ, ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸ್ ಇಲಾಖೆಯ ಗುಪ್ತದಳದ ಪೇದೆಯೊಬ್ಬರ ವಾಹನವೂ ನಾಪತ್ತೆಯಾಗಿದೆ. ಪೊಲೀಸರಿಗೆ ಈ ರೀತಿ ಆದರೆ ಸಾಮಾನ್ಯ ಜನರು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯವೆಂಬ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.
ರಾತ್ರಿ ವೇಳೆ ಲೋಡ್ ಶೆಡ್ಡಿಂಗ್ ಬೇಡ, ಜತೆಗೆ ಪೊಲೀಸರು ಮಾಪ್ತಿಯಲ್ಲಿ ಗಸ್ತು ತಿರುಗುವ ಮೂಲಕ ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಜನತೆ ಆಗ್ರಹಿಸಿದ್ದಾರೆ.