ಕೈವಾರ ಗ್ರಾಮ ಪಂಚಾಯತ್ ಪಿಡಿಒ ಅಮಾನತು
ಚಿಂತಾಮಣಿ: ಕೈವಾರ ಗ್ರಾಪಂ ಅಭಿವೃದ್ದಿ ಅಧಿಕಾರಿ ನಿಲೂಪರ್ರನ್ನು ಅಮಾನತ್ತುಗೊಳಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲಾಮಂಜುನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಾಲೂಕಿನ ಕೈವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ನೀಲೂಪರ್ ವಿವಿಧ ಯೋಜನೆಗಳ ಅಡಿ ಆಗಿರುವ ಖರ್ಚು-ವೆಚ್ಚುಗಳ ಬಗ್ಗೆ ದಾಖಲೆಗಳ ತನಿಖೆ ಕೈಗೊಂಡು ವಿವರವಾದ ವರದಿ ಸಲ್ಲಿಸುವಂತೆ ಜಿಪಂ ಯೋಜನಾ ನಿರ್ದೇಶಕ(ಡಿ.ಆರ್.ಡಿ.ಎ.ಕೋಶ) ಜಿಪಂ ಚಿಕ್ಕಬಳ್ಳಾಪುರ ಅವರಿಗೆ ಸೂಚಿಸಲಾಗಿದೆ. ಕೈವಾರ ಗ್ರಾಪಂ ಕಾರ್ಯಾಲಯಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡು ಉಲ್ಲೇಖ(5)ರಲ್ಲಿ ವರದಿ ಸಲ್ಲಿಸುತ್ತಾರೆ.
ಸದರಿ ವರದಿಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅವರು ಆರೋಪಿಸಿರುವಂತೆ ಎಸ್. ಶಂಕರಪ್ಪ ಹಿಂದಿನ ಪ್ರಭಾರ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಅವರು ಒಂದೇ ದಿನ ಎಂಟು ಲಕ್ಷ ರು. ಡ್ರಾ ಮಾಡಿರುವುದು ಕಂಡು ಬಂದಿರುವುದಿಲ್ಲ. ಗ್ರಾಪಂನಲ್ಲಿ ಖರ್ಚಾಗಿರುವ ಹಣ 11,97,466.00 ಮತ್ತು 6,13,840.00 ರು.ಗಳಿಗೆ ಯಾವುದೇ ಓಚರ್ಗಳನ್ನು ಹಾಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಜರು ಪಡಿಸಿರುವುದಿಲ್ಲ ಮತ್ತು ಗ್ರಾಪಂ ವಿವಿಧ ಯೋಜನೆಗಳನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ಗ್ರಾಪಂ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಪಾಲಿಸಬೇಕಾದ ನಿಯಮಾನುಸಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಲ್ಲಿ ವಿಫಲಗೊಂಡಿದ್ದು ಕರ್ತವ್ಯಲೋಪ ಎಸಗಿರುವುದು ಏಕಪಕ್ಷೀಯ ನಿರ್ಣಯಗಳನ್ನು ಕೈಗೊಂಡು ಗ್ರಾಪಂ ಅಭಿವೃದ್ಧಿ ಕುಂಠಿತವಾಗುವಂತೆ ನಡೆದುಕೊಂಡಿರುವುದು ಮೇಲನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.
ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಶಿಸ್ತು ಪ್ರಾಧಿಕಾರ(ವರ್ಗೀಕಣ ನಿಯಂತ್ರಣ ಮತ್ತು ಅಫೀಲು ಕರ್ನಾಟಕ ನಾಗರಿಕ ಸೇವಾ )ನಿಯಮಗಳ ಅಧಿಕಾರಿ ಚಲಾಯಿಸಿ ಕೈವಾರ ಗ್ರಾಪಂ ಅಭಿವೃದ್ದಿ ಅಧಿಕಾರಿ ನೀಲೂಪರ್ ತೋರಿದ ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ, ಮೇಲಾಧಿಕಾರಿಗಳ ಆದೇಶ ಪಾಲಿಸುವಲ್ಲಿ ವಿಫಲರಾಗಿರುವ ಆರೋಪಗಳ ಹಿನ್ನಲೆಯಲ್ಲಿ ಇವರನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಲು ಆದೇಶಿಸಿರುತ್ತಾರೆ.