'ರೈತರ ಅಭಿವೃದ್ಧಿಗೆ ಪೂರಕ ಕೆಲಸ ಆಗುತ್ತಿಲ್ಲ'
ಚಿಕ್ಕಬಳ್ಳಾಪುರ: ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾಗಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಸಮರ್ಪಕವಾಗಿ ಸವಲತ್ತುಗಳು ಜನರಿಗೆ ತಲುಪುತ್ತಿಲ್ಲ ಎಂದು ಶಾಸಕ ಡಾ.ಕೆ. ಸುಧಾಕರ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಮಂಡಿಕಲ್ಲು ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಶೇ.14 ರಷ್ಟು ಜನರ ಮನೆಯಲ್ಲಿ ಮಾತ್ರ ಶೌಚಾಲಯ ಇದೆ. ನಿರ್ಮಲ ಭಾರತ ಯೋಜನೆಯಡಿ ಶೌಚಾಲಯ ಕಟ್ಟಿಕೊಳ್ಳಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 15,000 ಸಹಾಯಧನವನ್ನು ಹಾಗೂ ಇತರರಿಗೆ 10,000 ರು.ಗಳನ್ನು ಸರ್ಕಾರ ನೀಡಲಿದ್ದು, ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಮಂಡಿಕಲ್ಲಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುವ ಬಗ್ಗೆ ದೂರುಗಳು ಬಂದಿದ್ದು, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆ ಇದರ ಬಗ್ಗೆ ನಿಗಾವಹಿಸಬೇಕೆಂದು ಸೂಚನೆ ನೀಡಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ರಸ್ತೆ, ಚರಂಡಿಗಳು ಹಾಳಾಗಿವೆ ಎಂದು ಜನರು ದೂರನ್ನು ಸಲ್ಲಿಸಿದ್ದಾರೆ. ಆ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಅವರು ತಿಳಿಸಿದರು.
ಕೆರೆ ಅಭಿವೃದ್ಧಿ ಕಾರ್ಯ, ಆಶ್ರಯ ಮನೆ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳ ಸಮರ್ಪಕ ಜಾರಿ ಹಾಗೂ ಮಂಡಿಕಲ್ಲಿನಲ್ಲಿ ಎಲ್ಲಾ ಜನರಿಗಾಗಿ ಸ್ಮಶಾನ ನಿರ್ಮಿಸಬೇಕೆಂದು ಜನರು ಒತ್ತಾಯಿಸಿದಾಗ, ಸರ್ಕಾರದ ಆದೇಶದಂತೆ ಎಲ್ಲಾ ಜನಾಂಗದವರಿಗೂ ಸ್ಮಶಾನ ನಿರ್ಮಿಸಲು ಜಾಗ ಕಲ್ಪಿಸಲಾಗುವುದು. ನೆಮ್ಮದಿ ಕೇಂದ್ರದಿಂದ ಕಂಪ್ಯೂಟರ್ ಮೂಲಕ ಮನಸ್ವಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಮಾಡಲಾಗುವುದು. ಸಾಗುವಳಿ, ಪಡಿತರ ಚೀಟಿ, ಇತ್ಯಾದಿಗಳನ್ನು ಕಾಲ ವಿಳಂಬ ಮಾಡದೆ ಜನರಿಗೆ ನೀಡುವುದು ನಮ್ಮ ಇಲಾಖೆಯ ಉದ್ದೇಶವಾಗಿದೆ ಎಂದು ತಹಸೀಲ್ದಾರ್ ನಟೇಶ್ ತಿಳಿಸಿದರು. ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಜಿಪಂ ಸದಸ್ಯೆ ಅನಿತಾ, ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯ ಕೇಶವರೆಡ್ಡಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.