ರೈಲು ವೇಳಾ ಪಟ್ಟಿ ಬದಲಾವಣೆಗೆ ಒತ್ತಾಯ
ಕೋಲಾರ: ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಬೆಳಿಗ್ಗೆ 10 ಗಂಟೆಗೆ ರೈಲು ತಲುಪುವಂತೆ ರೈಲಿನ ವೇಳಾಪಟ್ಟಿಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿ ಯುನೈಟೆಡ್ ಇಂಡಿಯಾ ಇಂಟಿಗ್ರೇಟೆಡ್ ವೆಲ್ಫೇರ್ ಫೌಂಡೇಷನ್ ರಾಜ್ಯಾಧ್ಯಕ್ಷ ಹಾಗೂ ವಕೀಲ ಕೆ. ನರೇಂದ್ರಬಾಬು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ರೆವಿನ್ಯೂ ಹೆಡ್ಮುನ್ಷಿ ಕೃಷ್ಣೇಗೌಡ ಮೂಲಕ ರಾಜ್ಯ ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಗೆ ರೈಲು ಸೌಲಭ್ಯ ಸಿಕ್ಕಿದ್ದರೂ ವೇಳಾ ಪೆಟ್ಟಿಯಲ್ಲಿನ ಗೊಂದಲ ಹಾಗೂ ಅನನೂಲದಿಂದಾಗಿ ರೈಲು ಸೇವೆ ಇನ್ನೂ ಜಿಲ್ಲಾ ಜನತೆಗೆ ಗಗನ ಕುಸುಮವಾಗುಳಿದಿದೆ. ಕೋಲಾರದಿಂದ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಜನ ಚಿಕ್ಕಬಳ್ಳಾಪುರಕ್ಕೆ, ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ವಿವಿಧ ಕಾರ್ಯನಿಮಿತ್ತ ಬಂದು ಹೋಗುತ್ತಿದ್ದಾರೆ. ಇವರೆಲ್ಲರಿಗೂ ಕಚೇರಿ ಸಮಯಕ್ಕೆ ರೈಲು ತಲುಪುವಂತಿದ್ದಲ್ಲಿ ಅತಿ ಹೆಚ್ಚು ಉಪಯೋಗವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರವನ್ನು, ಇದೇ ಸಮಯಕ್ಕೆ ಕೋಲಾರವನ್ನು ತಲುಪುವ ರೀತಿಯಲ್ಲಿ ರೈಲು ಸಾರಿಗೆಯನ್ನು ಕಲ್ಪಿಸಿದ್ದಲ್ಲಿ ಸರ್ಕಾರಿ ನೌಕರರಿಗೆ, ಸಾರ್ವಜನಿಕರಿಗೆ ಕಚೇರಿ ಸಮಯಕ್ಕೆ ತಲುಪಲು ಅವಕಾಶವಾಗುವುದು. ಇದೇ ರೀತಿ ಸಂಜೆ 6 ಗಂಟೆಗೆ ಚಿಕ್ಕಬಳ್ಳಾಪುರದಿಂದ ಕೋಲಾರವನ್ನು, ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ರೈಲು ತಲುಪುವ ವ್ಯವಸ್ಥೆ ಮಾಡಿದ್ದಲ್ಲಿ ಪ್ರತಿನಿತ್ಯ ಈ ಎರಡೂ ಜಿಲ್ಲೆಗಳಿಗೆ ಬಂದು ಹೋಗುವ ನಿತ್ಯಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.