ಸಿಎಂರನ್ನು ಅಧಿಕಾರದಿಂದ ಕೆಳಗಿಳಿಸಲು ಸಂಚು
ಕೋಲಾರ: ಹಿಂದೆ ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕುತಂತ್ರ ನಡೆಸಿದ ವಿರೋಧ ಪಕ್ಷದವರು ಈಗ ಮತ್ತೊಬ್ಬ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಲು ಸಂಚು ನಡೆಸುತ್ತಿದ್ದಾರೆಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗಾಗಿ ಜಾರಿಗೆ ತಂದ ಶಾದಿ ಭಾಗ್ಯ, ಅನ್ನ ಭಾಗ್ಯ ಯೋಜನೆಗಳಿಂದ ಹತಾಶರಾಗಿರುವ ವಿರೋಧ ಪಕ್ಷದ ಮುಖಂಡರು ಸಿದ್ದರಾಮಯ್ಯನವರ ಕಾಲು ಎಳೆಯಲು ಯತ್ನಿಸುತ್ತಿದ್ದು ಇದಕ್ಕೆ ಹಿಂದುಳಿದ ಜಾತಿಗಳು ಅವಕಾಶ ನೀಡಬಾರದೆಂದು ತಿಳಿಸಿದರು.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿ ಆಗಿರಬೇಕೆಂದು ಮತದಾರರು ಬಯಸಿದ್ದಾರೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದಲೇ ಜ.12 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಹಾಗೂ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯನವರಿಗೆ ಬೆಂಬಲ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲು ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಚಿಂತನೆ ನಡೆಸಿದ್ದಾರೆಂದರು.
ಸಿದ್ದರಾಮಯ್ಯವರನ್ನು ಅವಧಿಗೆ ಮುಂಚೆ ಅಧಿಕಾರದಿಂದ ಇಳಿಸಿದರೆ ಕಾಂಗ್ರೆಸ್ ವಿರುದ್ಧವೂ ಪ್ರತಿಭಟಿಸುತ್ತೇವೆ, ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಡಲು ಸಾಧ್ಯವಾಗದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ವಿರೋಧ ಪಕ್ಷದವರು ಪ್ರಯತ್ನಿಸಿದರೆಂದು ದೂರಿದರು.
ಕಬ್ಬು ಸರಬರಾಜು ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡಿಲ್ಲವೆಂದು ಪ್ರತಿಭಟನೆ ನಡೆದ ಸಂದರ್ಭದಲ್ಲಿ ರೈತನೊಬ್ಬ ವಿಷ ಸೇವಿಸಿದ್ದ. ಪ್ರತಿಭಟನೆ ನಡೆದ ಸ್ಥಳಕ್ಕೆ ಹತ್ತಿರವಿದ್ದ ಆಸ್ಪತ್ರೆಗೆ ರೈತನನ್ನು ಸೇರಿಸಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಾಗಿತ್ತು. ಆದರೆ, ರೈತನನ್ನು ಆಸ್ಪತ್ರೆಗೆ ಸೇರಿಸದೆ ಸಾಯುವಂತೆ ಮಾಡಿ, ಪ್ರಕರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸಿದ್ದು ಸರಿಯೇ ಎಂದು ಪ್ರಶ್ನಿಸಿದರಲ್ಲದೆ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬುದು ಒಕ್ಕೂಟದ ಒತ್ತಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಪಿ. ರಾಜಕುಮಾರ್, ಗೋಕುಲ್ ನಾರಾಯಣಸ್ವಾಮಿ, ಉದಯಕುಮಾರ್, ಎಸ್. ಮಂಜುನಾಥ್, ಅಂಜಲಿ ಸೋಮಣ್ಣ, ಚನ್ನಕೇಶವ, ಬೆಳ್ಳಂಬರಿ ನಾಗರಾಜ್, ಸೀನಪ್ಪ, ಮಲ್ಲೇಶ್, ಶಂಕರ ಪಾಂಡೆ, ಎಂ. ನಂದೀಶ್, ಕೃಷ್ಣ, ಮಧುಸೂದನ್, ಕೆ.ಎಸ್. ಕೃಷ್ಣಮೂರ್ತಿ, ಅಂಚೆ ಅಶ್ವತ್ಥ್, ನಗರಸಭೆ ಸದಸ್ಯ ಸೋಮಶೇಖರ್ ಇದ್ದರು.