ಅತ್ಯಾಚಾರ ಆರೋಪಿ ಪೊಲೀಸ್ ವಶಕ್ಕೆ
ಕೋಲಾರ: ತನ್ನ ಪಕ್ಕದ ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಬಂಧಿತನಾಗಿರುವ ಮಾಲೂರಿನ ಡಿ.ಟಿ. ಮಂಜುನಾಥ್ ಎಂಬವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮಾಲೂರು ಪಟ್ಟಣದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಮಂಜುನಾಥ್ ವಿರುದ್ಧ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಾಚಾರ ಪ್ರಕರಣ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬಂಧನದ ಭೀತಿಯಿಂದ ಆರೋಪಿ ತಲೆಮರಿಸಿಕೊಂಡಿದ್ದ. ಪೊಲೀಸರು ಈ ವ್ಯಕ್ತಿಗಾಗಿ ಶೋಧನೆ ಕೈಗೊಂಡಿದ್ದರು. ತಮಿಳುನಾಡಿನ ಹೊಸೂರು ಬಳಿ ಸಿಕ್ಕಿಬಿದ್ದ ಆರೋಪಿಯ ವಿರುದ್ಧ ಸೆಕ್ಷನ್ 376ನೇ ಕಾನೂನಿನಡಿ ಪ್ರಕರಣ ದಾಖಲು ಆಗಿದ್ದರಿಂದ ಮಾಲೂರು ಪೊಲೀಸರು ಆರೋಪಿಯನ್ನು ಶುಕ್ರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂದು ಪೊಲೀಸರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನ್ಯಾಯಾಧೀಶರು ಆರೋಪಿ ಮಂಜುನಾಥರನ್ನು ಡಿ.31ರವರೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.