ಅನವಶ್ಯಕ ನೀರು ಪೋಲು ಮಾಡದಿರಿ
ಬಾಗೇಪಲ್ಲಿ: ಕೆರೆ, ಕುಂಟೆ, ಕಾಲುವೆ, ಕೊಳವೆ ಬಾವಿಗಳಲ್ಲಿರುವ ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ಮಿತವಾಗಿ ಬಳಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರೆ ನೀಡಿದರು.
ತಾಲೂಕಿನ ಬಿಳ್ಳೂರು ಗ್ರಾಮದ ಸಮೀಪದಲ್ಲಿರುವ ವಂಡಮಾನ್ ಡ್ಯಾಂನಲ್ಲಿ 50 ಲಕ್ಷ ವೆಚ್ಚದಲ್ಲಿ ನೀರು ಸೋರಿಕೆಯಾಗದಂತೆ ತಡೆಗೋಡೆ ನಿರ್ಮಾಣದ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಈಗಾಗಲೇ ತಾಲ್ಲೂಕು ಸತತ ಬರಗಾಲದಿಂದ ತತ್ತರಿಸಿ ಹೋಗಿದೆ. ನೀರಿನ ಅಭಾವ ಹೆಚ್ಚಾಗಿದ್ದು, ಈ ಬಾರಿ ಹಾಕಿರುವ ಬೆಳೆಗಳು ಬೆಳೆಯುವಷ್ಟು ಮಾತ್ರ ಮಳೆ ಬಿದ್ದಿದೆ. ಇನ್ನು ಕುಂಟೆ ಕಾಲುವೆಗಳಿಗೆ ಅಲ್ಪ-ಸ್ಪಲ್ಪ ನೀರು ಬಂದಿದ್ದು ಈ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಮಿತವಾಗಿ ಬಳಸಿಕೊಳ್ಳಬೇಕು ಎಂದರು.
ಅಲ್ಲದೆ ಡಿಸೆಂಬರ್ನಲ್ಲೇ ನೀರಿನ ಅಭಾವ ಹೆಚ್ಚಾಗಿದ್ದರೆ ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚಿನ ನೀರಿನ ಅಭಾವ ತಲೆ ದೋರುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಂಡಮಾನ್ ಡ್ಯಾಂನಲ್ಲಿ ನೀರು ಶೇಖರಣೆಯಾದರೆ ರಾಶ್ಚೆರುವು, ನಾರೇಮದ್ದೇಪಲ್ಲಿ ಮತ್ತು ಬಿಳ್ಳೂರು ಪಂಚಾಯ್ತಿಗಳ ಜನರಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗಲಿದೆ. ಆದರೆ ಈ ಡ್ಯಾಂಗೆ ಬರುತ್ತಿರುವ ನೀರು ಸೋರಿಕೆಯಾಗಿ ಪಕ್ಕದ ಆಂಧ್ರಪ್ರದೇಶಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದಲೇ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲು 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಎಲ್ಲೇ ಕಾಮಗಾರಿಗಳು ನಡೆದರೂ ಅಲ್ಲಿನ ಸ್ಥಳೀಯ ಜನ ಪ್ರತಿನಿಧಿಗಳು, ಆ ಭಾಗದ ಜನರು ಹಾಗೂ ಮುಖಂಡರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಬೇಕು. ಕಾಮಗಾರಿ ಕಾಟಾಚಾರಕ್ಕೆ ನಡೆಯುತ್ತಿದ್ದರೆ ಕೂಡಲೇ ತಮ್ಮ ಗಮನಕ್ಕೆ ತಂದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ವಂಡಮಾನ್ ಡ್ಯಾಂನಲ್ಲಿ ಹೂಳು ತೆಗೆಯಲು ಹಣ ಮಂಜೂರು ಮಾಡಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಿಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳ ಸ್ಥಳಗಳಿಗೆ ಭೇಡಿ ನೀಡಿ ಗುಣಮಟ್ಟ ಪರಿಶೀಲಿಸಿದರು.
ಜಿಪಂ ಸದಸ್ಯೆ ಅಮರಾವತಿ ಕೃಷ್ಣಪ್ಪ, ತಹಸೀಲ್ದಾರ್ ಎಂ.ಎ.ಪದ್ಮ, ಜಿಪಂ ಉಪವಿಭಾಗದ ಎಇಇ ಪಿ.ವಿ. ನಾಗಪ್ಪ, ಜಿಪಂ ಮಾಜಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಮಾಜಿ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಬಿ.ವಿ.ವೆಂಕಟರಮಣ, ಮುಖಂಡರಾಡ ರಹಮತ್ತುಲ್ಲಾ, ಫಕ್ರುದ್ದೀನ್, ಗಂಗಾಧರ್, ಪ್ರಕಾಶ್ರೆಡ್ಡಿ, ಸಂಪತ್ ಮತ್ತಿತರರು ಇದ್ದರು.