ಅಪಘಾತಕ್ಕೆ ಕಾರಣವಾದ ಟಿಪ್ಪರ್ ವಶಕ್ಕೆ ಆಗ್ರಹ
ಮಾಲೂರು/ಟೇಕಲ್: ಕಳೆದ ರಾತ್ರಿ ಗ್ರಾಮದ ಯುವಕ ಸಂತೋಷ್ ಸಾವಿಗೆ ಕಾರಣವಾದ ಟಿಪ್ಪರ್‌ನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಡಗನಹಳ್ಳಿ ಗ್ರಾಮಸ್ಥರು ಮೃತ ಸಂತೋಷನ ಹೆಣ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಟೇಕಲ್ ರಸ್ತೆಯ ವಡಗನಹಳ್ಳಿ ಗೇಟ್ ಬಳಿ ನಡೆದಿದೆ.
ಗುರುವಾರ ರಾತ್ರಿ ಅತಿ ವೇಗದಲ್ಲಿ ಟೇಕಲ್ ಕಡೆಯಿಂದ ಬಂದ ಜಲ್ಲಿ ಕಲ್ಲು ಸಾಗಣಿಕೆಯ ಟಿಪ್ಪರ್ ಬೈಕಿನಲ್ಲಿ ವಾಪ್ಪಾಸ್ಸಾಗುತ್ತಿದ್ದ ಯುವಕ ಸಂತೋಷ್‌ಗೆ(23) ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ವಡಗನಹಳ್ಳಿ ಗ್ರಾಮಸ್ಥರು ಸಂತೋಷನ ಹೆಣವನ್ನು ಆಸ್ವತ್ರೆಗೆ ಸಾಗಿಸದೆ ಶುಕ್ರವಾರ ಬೆಳಿಗ್ಗೆ ಗೇಟ್ ಬಳಿ ಮಾಲೂರು ರಸ್ತೆಯಲ್ಲಿ ಹೆಣ ಇಟ್ಟು ಪ್ರತಿಭಟಿಸಿದರು. ಆರ್.ಟಿ.ಒ.ಅಧಿಕಾರಿಗಳ ಕುಮ್ಮಕ್ಕುವಿನಿಂದ ಟೇಕಲ್ ಬಳಿ ಗಣಿ ಮಾಫಿಯಾದವರು ದಿನ ನಿತ್ಯ ವಾಹನಗಳನ್ನು ಅತಿವೇಗದಲ್ಲಿ ಓಡಿಸುತ್ತಿದ್ದು, ವಾರಕ್ಕೆ ಒಂದು ಅಪಘಾತ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನೆಕಾರರು ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನ್ನು ಹಾಗೂ ಒವರ್ ಲೋಡ್ ವಾಹನಗಳನ್ನು ತಡೆಯುವ ಭರವಸೆ ನೀಡುವ ತನಕ ಶವವನ್ನು ಎತ್ತುವುದಿಲ್ಲ ಎಂಬ ಪಟ್ಟು ಹಿಡಿದು ಕುಳಿತರು.
ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ, ಮಾಜಿ ಸದಸ್ಯ ವಿ. ಗೋಪಾಲ್‌ರೆಡ್ಡಿ, ಪುರಸಭೆ ಸದಸ್ಯ ವೇಮನ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಗೋಮರ್ಧನ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಆಶೋಕ್ ಕುಮಾರ್ ಹಾಗೂ ಆರ್‌ಟಿಒ ಅಧಿಕಾರಿ ಶ್ರೀನಿವಾಸ್ ಜಲ್ಲಿ ಕ್ರಷರ್ ರವರಿಗೆ ನೋಟಿಸ್ ಕಳುಹಿಸುವ ಮೂಲಕ ಕಲ್ಲಿನ ಜಲ್ಲಿಯ ಅಕ್ರಮ ಸಾಗಣಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಜತೆಯಲ್ಲಿ ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನ್ನು ವಶಪಡಿಸಿಕೊಂಡು ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಸಂತೋಷನ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ತೆರೆದುಕೊಂಡು ಹೋಗಲಾಯಿತು. ಪೆನ್ಸಿಲ್ ರೆಡ್ಡಿ, ಬುಜ್ಜಿ ಶ್ರೀನಾಥ್, ರಘುನಾಥ್ ರಾಜು, ಮೃತ ಸಂತೋಷನ ತಂದೆ ಹನುಮಂತರೆಡ್ಡಿ, ಬಾಬು ರೆಡ್ಡಿ ಇದ್ದರು.