ಆಲೂಗಡ್ಡೆಗೆ ಅಂಗಮಾರಿ ರೋಗ: ನಿಯಂತ್ರಣಕ್ಕೆ ವಿಶೇಷ ಪ್ಯಾಕೇಜ್
ಕೋಲಾರ: ಆಲೂಗಡ್ಡೆ ಬೆಳೆದಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಆಲೂಗಡ್ಡೆ ಬೆಳೆಗೆ ಬರುವ ಕೊನೆ ಅಂಗಮಾರಿ ರೋಗವನ್ನು ನಿಯಂತ್ರಿಸಲು 2013-14 ನೇ ಸಾಲಿನ ಆಲೂಗಡ್ಡೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪ್ರತಿ ಫಲಾನುಭವಿಗಳಿಗೆ ಗರಿಷ್ಠ 2 ಹೆಕ್ಟೇರ್‌ವರೆಗೆ 6 ಸಾವಿರ ರು. ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಜೈವಿಕ ಗೊಬ್ಬರಗಳ ಬಳಕೆ, ಶಿಲೀಂಧ್ರನಾಶಕಗಳು, ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿ, ಬೆಳೆ ವಿಮೆ ಹಾಗೂ ಸಾವಯವ ಗೊಬ್ಬರಗಳ ಬಳಕೆಗಾಗಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ಅರ್ಜಿಯೊಂದಿಗೆ ಪಹಣಿ, ಬೆಳೆ ದೃಡೀಕರಣ, ಶಿಲೀಂದ್ರ ನಾಶಕ, ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಿದ ಬಿಲ್ಲುಗಳನ್ನು ನೀಡಲು ಸೂಚಿಸಲಾಗಿದೆ. ಸ್ವಯಂ ಘೋಷಿತ ಪತ್ರದೊಂದಿಗೆ ರೈತರು ಜಾತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪ್ರತಿಯನ್ನು ನೀಡಲು ತಿಳಿಸಲಾಗಿದೆ. ರೈತರು ಕೂಡಲೇ ತಾಲೂಕಿನ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್, ಕೋಲಾರ ಅವರ ಕಚೇರಿಯನ್ನು ಸಂಪರ್ಕಿಸಬಹುದು.