ಗುಡಿಬಂಡೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಗುಡಿಬಂಡೆ: ಸ್ಥಳೀಯ ಪಪಂನ 2012-13ನೇ ಸಾಲಿನ ನಗರೋತ್ಥಾನ ಯೋಜನೆಯಡಿ ವಾರ್ಡ್ ನಂ 1 ರಲ್ಲಿ ಇಂದಿರಾನಗರದ ಸರ್ಕಾರಿ ಆಸ್ಪೆತ್ರೆಯಿಂದ ಬ್ರಹ್ಮಯ್ಯ ಮಠದವರೆಗೂ ನಿರ್ಮಾಣವಾಗುತ್ತಿರುವ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರೆವರಿಸಿದರು.
ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಗುಡಿಬಂಡೆ ಪಪಂಗೆ 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 4 ಕೋಟಿ ರಸ್ತೆ ಕಾಮಗಾರಿಗಳಿಗೆ ಇನ್ನುಳಿದ 1 ಕೋಟಿ ಇತರೆ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಈ ಅನುದಾನದಿಂದ ಪಟ್ಟಣದ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿಕೊಳ್ಳಬಹುದು. ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ನಗರಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಆರ್. ನಾಗರಾಜಯ್ಯಶೆಟ್ಟಿ ಮಾತನಾಡಿ, ಸರ್ಕಾರಿ ಹಣ ಜನತೆಯ ಹಣವಾದ್ದರಿಂದ ಅನುದಾನ ಸದ್ಬಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 4 ವಿಕಲಚೇತನ ಮಕ್ಕಳಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಾಧನ ಸಲಕರಣೆಗಳನ್ನು ವಿತರಿಸಿದರು. ತಹಸೀಲ್ದಾರ್ ಶೈಲಜಾ, ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಕಾಂತ್, ಪಪಂ ನೂತನ ಸದಸ್ಯರು ಇದ್ದರು.