ಚಿನ್ನ ಕೊಟ್ಟ ನಾಡಿಗೆ ನೀರು ಕೊಡಲು ಆಗದೆ?
ಕೆಜಿಎಫ್: ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಹತ್ತಾರು ವರ್ಷಗಳಿಂದ ಮಳೆಯಿಲ್ಲದೆ ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ವಿದ್ಯುತ್ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಶಾಸಕ ಪುಟ್ಟಣ್ಣಯ್ಯ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್ ಅಧ್ಯಕ್ಷತೆಯಲ್ಲಿ ಶಾಶ್ವತ ನಿರಾವರಿ ಯೋಜನೆಗೆ ಒತ್ತಾಯಿಸಿ ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳ ಮಧ್ಯೆ ಹಗಲು ರಾತ್ರಿ ಎನ್ನದೆ ಅನ್ನ ನೀಡುತ್ತಿರುವುದು ಬಡ ರೈತರೇ ಹೊರತು ಐಟಿ. ಬಿಟಿ ಮುಂತಾದ ಐಶ್ಯರಾಮಿ ಕಂಪನಿ ಹಾಗೂ ವಿಧಾನ ಸೌಧದಿಂದ ರಾಗಿ, ಬತ್ತ ಉದುರುವುದಿಲ್ಲ ಎಂಬುದನ್ನು ಮೊದಲು ಸರ್ಕಾರಗಳು ತಲೆಯಲ್ಲಿಟ್ಟುಕೊಂಡು ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಹೇಳಿದರು.
ಬೆಂಗಳೂರಿಗೆ 15 ಟಿಎಂಸಿ ನೀರನ್ನು ಡ್ಯಾಮ್‌ಕಟ್ಟಿ ತಂದಿಲ್ಲ. ಪೈಪ್ ಮೂಲಕ ತಂದಿದ್ದೀರಿ ಕಾವೇರಿ ಮತ್ತು ಗಂಗಾ ಕಾವೇರಿ ನೀರನ್ನು ತರಲು ಯಾಕೆ ಆಗುತ್ತಿಲ್ಲ. ತಮಿಳುನಾಡು ಮುಖ್ಯಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಕಾವೇರಿ ನೀರಿನ ಜಗಳದಿಂದ 35 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 10 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಕಾರಣ ಗ್ರಾಮಸ್ಥರು ರೈತರು ಬದುಕಲು ಭೂಮಿಯಿಲ್ಲದೆ ನೀರಿಲ್ಲದೆ ಜಮೀನುಗಳನ್ನು ಮಾರಾಟ ಮಾಡಿ ಗುಳೆಹೋಗುತ್ತಿದ್ದಾರೆ. ಬಡ ಕುಟುಂಬ ವರ್ಗದವರಿಗೆ, ವೃದ್ಧಾಪ್ಯ, ಅಂಗವಿಕಲ, ವಿಧವಾ ಸೇರಿದಂತೆ ಸರ್ಕಾರ ನೀಡುವ 500, 700 ರು.ಗಳನ್ನು 6 ತಿಂಗಳು ಕಳೆದರೂ ವಿತರಿಸದ ಸರ್ಕಾರ ಮೊದಲು ಆಯಾ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಸಂಬಳಗಳನ್ನು ನಿಲ್ಲಿಸಿ ಇಂತಹವರಿಗೆ ನೀಡಬೇಕು ಎಂದರು.
ದೇಶದಲ್ಲಿ ಜಾತಿ ಹೆಸರಲ್ಲಿ ರಾಜಕೀಯ ಮಾಡಿ ದೇಶವನ್ನೇ ಹಾಳು ಮಾಡುತ್ತಿರುವವರಿಗೆ ಜನರು ತಕ್ಕ ಪಾಠವನ್ನು ಕಲಿಸುವುದುನ್ನು ಬಿಟ್ಟು ಜಾತಿಗೆ, ಹೆಂಡಕ್ಕೆ, ಹಣಕ್ಕೆ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ತಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಅವರ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ದೇಶಕ್ಕೆ ಚಿನ್ನ, ಹಾಲು, ರೇಷ್ಮೆಯನ್ನು ನೀಡಿದ ಕೋಲಾರ ಜಿಲ್ಲೆಗೆ ಶಾಶ್ವತ ನೀರನ್ನು ಕೊಡಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ನೈಸ್ ರಸ್ತೆ, ಐಶಾರಾಮಿ ಕಂಪನಿಗಳು, ಖಾಸಗಿ ಕಾರ್ಖಾನೆಗಳನ್ನು ನಿರ್ಮಿಸಲು ರೈತರ ಭೂಮಿಯನ್ನು ಕಬಳಿಸಲು ಕೋಟ್ಯಂತರ ಸಂಭಾವನೆ ಮಾಡಲು ಮುಂದಾಗುತ್ತಿರುವ ರಾಜಕಾರಣಿಗಳು ಭೂಮಿಯೇ ನಮ್ಮ ತಾಯಿ ಎಂದು ನಂಭಿರುವ ಅನ್ನದಾತರ ಜಮೀನಿಗೆ ಕೇವಲ 4-5 ಲಕ್ಷ ಬೆಲೆ ನಿಗಧಿ ಮಾಡುತ್ತಿರುವುದು ಯಾವ ನ್ಯಾಯ ಎಂದರು.
ನೇತ್ರಾವತಿ ತಿರುವಿಗೆ ಸಂಬಂಧಿಸಿ ಆ ಭಾಗದವರೊಂದಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯವರು ಚರ್ಚೆ ಸಭೆಗಳನ್ನು ಮಾಡಿ ಅಂತರ್ಜಲವನ್ನು ರಕ್ಷಣೆಗೆ ಮತ್ತು ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಮತ್ತು ಡಾ.ಪರಮಶಿವಯ್ಯ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕಿದೆ. ರೈತರು ಕೃಷಿ ಭೂಮಿಯನ್ನು ನಂಬಿಕೊಂಡು ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ ಮಳೆಯಿಲ್ಲದೆ ಬೆಳೆ ನಷ್ಟವಾದರೆ ಬ್ಯಾಂಕ್‌ನವರು ಭೂಮಿಗೆ ನೋಟಿಸ್ ಜಾರಿಗೊಳಿಸಬೇಕು, ಮತ್ತು ಆ ಭೂಮಿಯನ್ನೆ ಜೈಲ್‌ಗೆ ಹಾಕಬೇಕೇ ಹೊರತು ಅಮಾಯಕ ರೈತರನ್ನಲ್ಲ ನೋಟಿಸ್‌ಗಳನ್ನು ಮತ್ತು ಇತರೆ ಕಿರುಕುಳ ನೀಡಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವವನ್ನು ಬ್ಯಾಂಕ್‌ಗಳ ಮುಂದೆಯಿಟ್ಟು ಪ್ರಟಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ತಮ್ಮ ಕಡೆ ಉಸಿರು ಇರುವವರೆಗೆ ಈ ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಮತ್ತು ಪರಮಶಿವಯ್ಯ ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇನೆ ಎಂದರು.