ದಲಿತರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲ: ಕಾರ್ಯಕರ್ತರ ಜಾಗೃತಿ ಜಾಥಾ
ಬಂಗಾರಪೇಟೆ: ದಲಿತರೇ ಅಧಿಕವಾಗಿರುವ ಕ್ಷೇತ್ರದಲ್ಲಿ ಸರ್ಕಾರ ದಲಿತರಿಗೆ ಯಾವುದೇ ರಕ್ಷಣೆ ನೀಡದ ಕಾರಣ ಪ್ರತಿದಿನ ಅವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಕೂಡಲೆ ಸರ್ಕಾರ ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಆಗ್ರಹಿಸಿ ದಲಿತ ಸಮಾಜ ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ದಲಿತರ ಜಾಗೃತಿ ಜಾಥಾ ಹಮ್ಮಿಕೊಂಡಿದ್ದರು.
ಜಾಥಾ ಉದ್ಘಾಟಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್ ಬಂಗಾರಪೇಟೆ ಕ್ಷೇತ್ರದಲ್ಲಿ ದಲಿತರು ಬಹುಸಂಖ್ಯಾತರಾಗಿದ್ದಾರೆ. ಆದರೆ ಸರ್ಕಾರದ ಯೋಜನೆಗಳು ಮಾತ್ರ ಇವರಿಗೆ ದಕ್ಕುತ್ತಿಲ್ಲ ಮಧ್ಯವರ್ತಿಗಳ ಪಾಲಾಗುತ್ತಿದೆ ಅಲ್ಲದೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಮೀತಿ ಮೀರಿ ನಡೆಯುತ್ತಿದ್ದರೂ ತಾಲೂಕು ಆಡಳಿತವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಗಮನಹರಿಸುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ದಲಿತರಿಗೆ ಪ್ರತ್ಯೇತ ಸ್ಮಶಾನವಿಲ್ಲ ಅದನ್ನು ಭೂ ಕಬಳಿಕೆದಾರರು ಒತ್ತುವರಿ ಮಾಡಿಕೊಂಡಿದ್ದಾರೆ. ದಲಿತರ ಕೇರಿಗಳಲ್ಲಿ ಕುಡಿಯಲು ನೀರಿಲ್ಲ, ರಸ್ತೆಗಳಿಲ್ಲ, ವಾಸಿಸಲು ಮನೆಗಳಿಲ್ಲ. ಕೆಲವರು ವಿನಾಕಾರಣ ದಲಿತರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಈ ಬಗ್ಗೆ ದಲಿತರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಸರ್ಕಾರ ರಚಿಸಿರುವ ತಹಸೀಲ್ದಾರ್ ನೇತೃತ್ವದಲ್ಲಿ ಅಟ್ರಾಸಿಟಿ ಸಭೆ ಕರೆಯಲು ತಾಲೂಕು ಆಡಳಿತ ಮುಂದಾಗಿಲ್ಲ ಎಂದು ಆರೋಪಿಸಿದರು. ತಾಲೂಕುನಾದ್ಯಂತ ದಲಿತರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಆ ಕಡೆ ನಿಗಾವಹಿಸದೆ ಸಂಪೂರ್ಣ ಕಡೆಗಣಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೆ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹರಿಗೆ ದಕ್ಕುವಂತೆ ಕ್ರಮ ಕೈಗೊಳ್ಳಬೇಕೆಂದು ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಸರ್ಕಾರಗಳೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ನಂತರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಹುಣಸನಹಳ್ಳಿ ರಮೇಶ್, ಕಾರ್ಯಾಧ್ಯಕ್ಷ ಯತೀಶ್, ಪಿಳ್ಳಪ್ಪ,ನಾಗರಾಜ್, ಕಾರ್ತಿಕ್, ಮಂಜುಳಾ, ಶ್ರೀನಿವಾಸ್, ಶ್ರೀಕಾಂತ್ ಇದ್ದರು.