ನಿಗಮಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ತನಿಖೆಗೆ ಮಾಜಿ ಶಾಸಕ ಒತ್ತಾಯ
ಗುಡಿಬಂಡೆ: ಪ.ಜಾತಿ ಮತ್ತು ಪ.ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸ್ಥಾಪಿಸಿರುವ ನಿಗಮ ಮತ್ತು ಮಂಡಳಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಸರ್ಕಾರ ಇದರ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಎನ್. ಸಂಪಂಗಿ ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.
ಮೊಯ್ಲಿ ಅಭ್ಯರ್ಥಿ: ಮುಂಬರುವ ಚುನಾವಣೆಯಲ್ಲಿ ಕೇಂದ್ರ ಸಚಿವ ಎಂ. ವೀರಪ್ಪಮೊಯ್ಲಿ ಅವರೇ ಪಕ್ಷದ ಅಭ್ಯರ್ಥ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಕ್ಷದ ಸಾಧನೆಗಳನ್ನು ಜನತೆಗೆ ತಿಳಿಸುವ ಮೂಲಕ ಚುನಾವಣೆಗೆ ಸಿದ್ಧತೆ ನಡೆಸಬೇಕೆಂದರು. ಕ್ಷೇತ್ರದಲ್ಲಿ ತಾವು ಮತ್ತು ಮೊಯ್ಲಿರವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಗತಿಗೆ ಶ್ರಮಿಸಿದ್ದೇವೆ.
ಹೀಗಾಗಿ ನಮ್ಮ ಸಾಧನೆಗಳು ಮುಂಬರುವ ದಿನಗಳಲ್ಲಿ ನಮಗೆ ಶ್ರೀರಕ್ಷೆಯಾಗಲಿದೆಯೆಂದು ಆಶಾಭಾವ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೆ. ಅಶ್ವತ್ಥರೆಡ್ಡಿ, ಹೆಚ್. ನರಸಿಂಹರೆಡ್ಡಿ, ಯೋಗಿಶ್ವರಿ ವಿಜಯ್, ದಪ್ಪರ್ತಿನಂಜುಂಡ ಆನಂದ್, ಅನಿಲ್‌ಕುಮಾರ್ ಮತ್ತಿತರಿದ್ದರು.