ಮುಂದೂಡಿದ ತೆರವು ಕಾರ್ಯಾಚರಣೆ
ಮುಳಬಾಗಲು: ಶುಕ್ರವಾರ ನಡೆದ ನಾಟಕೀಯ ಬೆಳವಣೆಗೆಯಲ್ಲಿ ಅಕ್ರಮ ಸಾಗುವಳಿ ತೆರವು ಪರ ಮತ್ತು ವಿರೋಧದ ನಡುವೆ ತೆರವು ಕಾರ್ಯಾಚರಣೆಯನ್ನು ಮುಂದಕ್ಕೆ ಹಾಕಲಾಯಿತು.
ಗ್ರಾಮದ ಸರ್ವೇ ನಂಬರ್‌ಗಳಾದ 378 ರಲ್ಲಿ 6 ಎಕರೆ 16 ಗುಂಟಿ, 379ರಲ್ಲಿ 2.36 ಗುಂಟೆ, 384ರಲ್ಲಿ 6 ಎಕರೆ 10 ಗುಂಟೆ ಒಟ್ಟು 18 ಎಕರೆ 10ಗುಂಟಿ ಜಮೀನಿನು 60ವರ್ಷಗಳ ಹಿಂದೆ ಗ್ರಾಮದ ಜೋಡಿದಾರರು ಶಾಲೆ ನಿರ್ಮಾಣಕ್ಕೆ ಬಿಟ್ಟುಕೊಟ್ಟಿದ್ದರು. ಇದರಲ್ಲಿ 15 ಎಕರೆ 25 ಗುಂಟೆ ಜಮೀನನ್ನು ಗ್ರಾಮದ ಕೆಲವರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬಂದಿದ್ದರು. ಇದನ್ನು ಪ್ರಶ್ನಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಡಿ.12ರಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಅವರು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಸಾಗುವಳಿದಾರರ ಪ್ರತಿರೋಧದ ನಡುವೆಯೂ ಸರ್ವೇ ಕಾರ್ಯ ಮುಗಿಸಿ, ಶುಕ್ರವಾರ ಶಾಲೆಯವರಿಗೆ ಜಮೀನು ಹಸ್ತಾಂತರಗೊಳಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ತಹಸೀಲ್ದಾರ್ ಮತ್ತು ಡಿವೈಎಸ್ಪಿ ಟಿ. ಸಿದ್ದಯ್ಯನವರು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯೊಂದಿಗೆ ಮೂಡಿಯನೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅಕ್ರಮ ಸಾಗುವಳಿದಾರರು ತಾವು ಜಿಲ್ಲಾಧಿಕಾರಿಗಳಿದಗೆ ಮನವಿ ಸಲ್ಲಿಸಿ ನ್ಯಾಯ ನೀಡಲು ಕೋರುವುದಾಗಿ ಹಾಗೂ ಅಲ್ಲಿಯವರೆವಿಗೂ ತೆರವುಗೊಳಸದಿರಲು ಮಾಡಿದ ಮನವಿ ಮೇರೆಗೆ ತೆರವು ಕಾರ್ಯಕ್ರಮವನ್ನು ಮುಂದೂಡಲಾಯಿತು.